ಬೆಂಗಳೂರು : ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಹಿಂದುಳಿದ ಸಮುದಾಯದ ನಾಯಕರು ಸಿಎಂ ಆಗಿರುವುದು ಕಾಂಗ್ರೆಸ್ ನ ಶಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಷದಲ್ಲಿ ದಲಿತ ನಾಯಕರಿಗೆ ಮುಖ್ಯಮಂತ್ರಿ ಆಗುವ ಅವಕಾಶವಿದ್ದು, ಇತರರಂತೆ ಕಾಂಗ್ರೆಸ್ ನಾಯಕರು ಮುಸ್ಲಿಂ ನಾಯಕ ಅಥವಾ ದಲಿತ ನಾಯಕನನ್ನು ಸಿಎಂ ಮಾಡುವ ಬಗ್ಗೆ ಮಾತನಾಡುವುದಿಲ್ಲ, ಆದರೆ ಅವಕಾಶಗಳಿವೆ ಎಂದರು.ರಾಜ್ಯದ ಅನೇಕರು ಕೆಲಸಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ, ಅಲ್ಲಿಂದ ತಮ್ಮ ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದಾರೆ, ಆದರೆ ಅವರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.ಅತ್ಯಂತ ಹಿರಿಯ ನಾಯಕ ಹಾಗೂ ಅನುಭವಿ ಎಂಬ ಕಾರಣಕ್ಕೆ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಖರ್ಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರುವುದೇ ಎಂಬ ಪ್ರಶ್ನೆಗೆ, ‘ನಾವು ಗುಜರಾತಿನಲ್ಲಿ ಹೆಚ್ಚಿನ ಕ್ಷೇತ್ರಗಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅಲ್ಲಿಯೂ ಆಪರೇಶನ್ ಕಮಲ ಮಾಡಿ ಚುನಾವಣೆ ಮಾಡಿದ್ದರು. ಹಿಮಾಚಲ ಪ್ರದೇಶ ಚುನಾವಣೆಯು ಭ್ರಷ್ಟಾಚಾರ ಹೆಚ್ಚು ದಿನ ನಡೆಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ನಮ್ಮ ನಾಯಕರೆಲ್ಲರೂ ಅಲ್ಲಿ ಉತ್ತಮ ಪ್ರಚಾರ ಮಾಡಿದ್ದಾರೆ. ಅಲ್ಲಿನ ಮತದಾರರು ಒಬ್ಬೊಬ್ಬರಿಗೆ ಒಂದೊಂದು ಬಾರಿ ಅವಕಾಶ ನೀಡುತ್ತಾ ಬಂದಿದ್ದಾರೆ. ರಾಜ್ಯದಲ್ಲಿಯೂ ಅದು ಮರುಕಳಿಸಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ತಿಳಿಸಿದರು.