ತುಮಕೂರು : ‘ಕ್ಷೀರಭಾಗ್ಯ’ ಯೋಜನೆಯ ದಶಮಾನೋತ್ಸವ ಪ್ರಯುಕ್ತ ಇಂದು ಮಧುಗಿರಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಸ್ವಕ್ಷೇತ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಸಿಎಂ ಆದ ಬಳಿಕ ಮೊದಲ ಬಾರಿಗೆ ಸಿದ್ದರಾಮಯ್ಯ ತುಮಕೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಇಂದು ಬೆಳಿಗ್ಗೆ10 ಗಂಟೆಗೆ ರಸ್ತೆ ಮೂಲಕ ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿರುವ ಸಿಎಂ, 11:15ಕ್ಕೆ ಮಧುಗಿರಿ ಪಟ್ಟಣ ತಲುಪಲಿದ್ದಾರೆ. 11:30ಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನೂತನ ಕನ್ನಡ ಭವನ ಕಟ್ಟಡದ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆಗೆ ವರ್ಷಾಚರಣೆ: ಕೆಪಿಸಿಸಿ ವತಿಯಿಂದ ನಾಳೆ ರಾಮನಗರದಲ್ಲಿ ಬೃಹತ್ ಕಾರ್ಯಕ್ರಮ
ನಂತರ ಕೆಎಂಎಫ್ ಹಾಗೂ ವಿವಿಧ ಹಾಲು ಒಕ್ಕೂಟಗಳಿಂದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿರುವ ‘ಕ್ಷೀರಭಾಗ್ಯ’ ಯೋಜನೆಯ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ರಸ್ತೆ ಮೂಲಕ ಮಧುಗಿರಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ13 ವಿವಿಧ ಮಳಿಗೆಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಿಶ್ರತಳಿ ಹೈನು ರಾಸುಗಳ ಚೆಕ್ ವಿತರಣೆ ಮಾಡಲಿದ್ದಾರೆ.
ಕೆ.ಎನ್ ರಾಜಣ್ಣ, ಕೆ.ವೆಂಕಟೇಶ್, ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಕೆ.ಶ್ರಿನಿವಾಸ್, ಜಿ.ಪಂ ಸಿ.ಇ.ಒ.ಪ್ರಭು, ಎಸ್ಪಿ ರಾಹುಲ್ ಕುಮಾರ್, ಮಧುಗಿರಿ ಉಪವಿಭಾಗ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಒಂದು ಲಕ್ಷಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.