ಬೆಂಗಳೂರು : ರಾಜ್ಯದ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ, ಈ ಪೈಕಿ 161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ರಾಜ್ಯದ ಬರ ಪರಿಸ್ಥಿತಿ, ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿಯ ಐದನೇ ಸಭೆ ಇಂದು ನಡೆಯಿತು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಇಂದಿನ ಸಭೆಯಲ್ಲಿ ಮಳೆ ಕೊರತೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿದ್ದೇವೆ. ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ಬರ ಘೋಷಣೆ ಮಾಡಿ, ಪರಿಹಾರ ಒದಗಿಸುವ ಬಗ್ಗೆ ನಿರ್ಧರಿಸಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದ 62 ತಾಲೂಕುಗಳಲ್ಲಿ ಮಾತ್ರ ಬರ ಪರಿಸ್ಥಿತಿ ಇದೆ ಎಂದು ವರದಿ ಬಂದಿತ್ತು. ನಾವು 140 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಲು ಸೂಚಿಸಿದ್ದೆವು. ಬೆಳೆ ಸಮೀಕ್ಷೆ ವರದಿ ನಿನ್ನೆ ಬಂದಿದೆ. ವರದಿ ಪ್ರಕಾರ, ಒಟ್ಟು 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಈ ಪೈಕಿ 161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. 34 ತಾಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿ ಇದೆ. 40 ತಾಲೂಕೂಗಳಲ್ಲಿ ಮಳೆ ಕೊರತೆ ಇದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ, ಸಮೀಕ್ಷೆ ಮಾಡಿದಾಗ ಹಸಿರಿನ ಹೊದಿಕೆ ಇದೆ ಎಂದು ವರದಿ ಬಂದಿದೆ. ಮಳೆ ಕೊರತೆ ಇದ್ದರೂ ಕೂಡ ಕೇಂದ್ರದ ವರದಿಯಲ್ಲಿ ಬರ ಪರಿಸ್ಥಿ ಇದೆ ಎಂದು ಘೋಷಣೆ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ಆಘಾತಕಾರಿ: ಕುಮಾರಸ್ವಾಮಿ
ಸಾಧಾರಣ ಬರ ಪರಿಸ್ಥಿತಿ ಇರುವ 34 ತಾಲೂಕುಗಳಲ್ಲೂ ಬರ ಘೋಷಣೆಗೆ ಶಿಫಾರಸು ಮಾಡುತ್ತಿದ್ದೇವೆ. ಒಂದು ವಾರದಿಂದ 10 ದಿನದ ಒಳಗೆ ಮತ್ತೊಮ್ಮೆ ಬೆಳೆ ಸಮೀಕ್ಷೆ ಮಾಡಿಸುತ್ತೇವೆ. ಒಂದು ವಾರದಲ್ಲಿ ಇರುವ ಪರಿಸ್ಥಿತಿ ನೋಡಿ ಮೆಮೊರಂಡಮ್ ರೆಡಿ ಮಾಡಲು ಹೇಳಲಾಗಿದೆ. ಕೇಂದ್ರಕ್ಕೆ ಬರ ಪರಿಸ್ಥಿತಿ ಬಗ್ಗೆ ಶಿಫಾರಸು ಮಾಡುತ್ತೇವೆ. ಮಳೆ ಕೊರತೆ ಇದ್ದರೂ ಹಸಿರು ಹೊದಿಕೆ ಇದೆ ಎಂದು ಯಾಕೆ ವರದಿ ನೀಡಲಾಗಿದೆ ಎಂದು ಸಮೀಕ್ಷೆ ಮಾಡಲು ಹೇಳಿದ್ದೇವೆ. ನಾಲ್ಕು ವಿವಿಗಳಿಗೆ ಈ ಸಂಬಂಧ ನಿರ್ದೇಶನ ನೀಡಿದ್ದೇವೆ ಎಂದರು.
ಕೂಡಲೇ ಟಾಸ್ಕ್ ಫೋರ್ಸ್ ರಚಿಸಿ ರೈತರಿಗೆ ಮೇವು, ಬಿತ್ತನೆ ಬೀಜ ಉಚಿತವಾಗಿ ಕೊಡಲು ನಿರ್ಧಾರ ಮಾಡಲಾಗಿದೆ. ಸರ್ಕಾರ ಬರ ಪರಿಸ್ಥಿತಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಒಬ್ಬರಿಗೆ 150 ದಿನ ಉದ್ಯೋಗ ಖಾತ್ರಿ ಕೊಡಲು ತೀರ್ಮಾನ ಮಾಡಲಾಗಿದೆ. ತಕ್ಷಣ ಕುಡಿಯುವ ನೀರು ಒದಗಿಸಲು ಸೂಚಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.