ನವದೆಹಲಿ: ಪಕ್ಷದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಆದ್ರೆ ಬಿಜೆಪಿಯಲ್ಲಿ ಪಕ್ಷದ ಮುಖ್ಯಸ್ಥರ ಆಯ್ಕೆ ನಡೆಯುತ್ತಿಲ್ಲ. ಬದಲಿಗೆ ಜೆಪಿ ನಡ್ಡಾ ಅವರ ಅಧಿಕಾರಾವಧಿಯನ್ನೇ 2024 ರವರೆಗೆ ವಿಸ್ತರಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೆಪಿ ನಡ್ಡಾ ಅವರ ಅಧಿಕಾರಾವಧಿಯು 20 ಜನವರಿ 2023ರಂದು ಕೊನೆಗೊಳ್ಳಲಿದ್ದು, 2024ರವರೆಗೆ ವಿಸ್ತರಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮೊದಲ ಏಳು ತಿಂಗಳು ಜೆಪಿ ನಡ್ಡಾ ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದರು. ಬಳಿಕ 20 ಜನವರಿ 2020 ರಂದು ಅವರನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನ ನೀಡಿತ್ತು. ಅಂದಿನಿಂದ ಇಲ್ಲಿಯವರೆಗೂ ಜೆಪಿ ನಡ್ಡಾ ತಮ್ಮ ಜವಾಬ್ದಾರಿಯನ್ನ ಉತ್ತಮವಾಗಿ ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2024ರ ಸಾರ್ವತ್ರಿಕ ಚುನಾವಣೆಯವರೆಗೂ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲಾಗುವುದು ಎಂದು ಬಿಜೆಪಿ ತಿಳಿಸಿದೆ.
ಇದಲ್ಲದೆ, ಅವರು ಆರ್‌ಎಸ್‌ಎಸ್‌ಗೆ ಆಪ್ತರು ಎಂದು ಪರಿಗಣಿಸಲಾಗಿದ್ದು, ಅವ್ರು ಕೇಂದ್ರದಲ್ಲಿ ಮಾತ್ರವಲ್ಲದೇ ಹಿಮಾಚಲ ಪ್ರದೇಶದಲ್ಲಿಯೂ ಸಚಿವರಾಗಿದ್ದರು. 1998 ರಿಂದ 2003ರವರೆಗೆ ಅವರು ಹಿಮಾಚಲ ಪ್ರದೇಶದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಇದರ ನಂತರ, ಅವರು 2008 ರಿಂದ 2010ರವರೆಗೆ ಧುಮಾಲ್ ಸರ್ಕಾರದಲ್ಲಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. 2012ರಲ್ಲಿ ಅವರು ಮೊದಲ ಬಾರಿಗೆ ರಾಜ್ಯಸಭೆಯ ಸದಸ್ಯರಾದರು. ಮೋದಿ ಸರ್ಕಾರದಲ್ಲಿ ಅವರು ಆರೋಗ್ಯ ಸಚಿವಾಲಯದ ಜವಾಬ್ದಾರಿಯನ್ನ ವಹಿಸಿಕೊಂಡರು. ಸದ್ಯ ಎರಡನೇ ಬಾರಿಗೆ ಬಿಜೆಪಿ ಅಧ್ಯಕ್ಷಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ.