ಬೆಂಗಳೂರು: ಚಿತ್ರಕಲೆ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸುವ ಒಂದು ಮಾಧ್ಯಮ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯಿರುವ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ 20ನೇ ಚಿತ್ರಸಂತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ ಮಾತನಾಡಿದರು.
ಚಿತ್ರಕಲಾ ಪರಿಷತ್ ಹಿಮಾಲಯದ ಎತ್ತರಕ್ಕೆ ಬೆಳೆಯಬೇಕು. ಈ ವರ್ಷ ನಾಲ್ಕೈದು ಕಡೆಗಳಲ್ಲಿ ಚಿತ್ರಸಂತೆ ಮಾಡಬೇಕು. ಚಿತ್ರಸಂತೆಯನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋಗಬೇಕು. ಮುಂದಿನ ವರ್ಷದಿಂದ ಶನಿವಾರ, ಭಾನುವಾರ ಚಿತ್ರಸಂತೆ ಆಯೋಜಿಸಿ ಎಂದರು.
ಚಿತ್ರಕಲಾ ಪರಿಷತ್ತು ಕೆಲಸ ಒಳ್ಳೆ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಸಾಮಾನ್ಯ ಜನರಲ್ಲಿ ಚಿತ್ರಕಲೆ ಅಭಿಪ್ರಾಯ ಮೂಡಿಸೋದು. ಚಿತ್ರಕಲಾ ಪರಿಷತ್ ಒಳ್ಳೆಯ ಕೆಲಸ ಮಾಡ್ತಿದೆ. ಇದು ನಮ್ಮ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ಸಂಸ್ಥೆ. ಇಲ್ಲಿ ಚಿತ್ರಗಳನ್ನು ಬರೀ ನೋಡೋದಲ್ಲ ಎಲ್ಲರೂ ಖರೀದಿ ಮಾಡಿ ಕಲಾವಿದರಿಗೆ ಪ್ರೋತ್ಸಾಹಿಸಿ. ನಾನು ಕೂಡ ಖರೀದಿ ಮಾಡುತ್ತೇನೆ ಎಂದರು.
ಚಿತ್ರಕಲಾ ಪರಿಷತ್ನಲ್ಲಿ ಸಿಎಂ ಬೊಮ್ಮಾಯಿ ನವಿಲಿನ ಚಿತ್ರ ಬಿಡಿಸಿದ್ದಾರೆ. ಸಿಎಂ ಕಲೆಯನ್ನ ಮೆಚ್ಚಿ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದಾರೆ. ಇನ್ನು ಸಿಎಂಗೆ ರಾಣೆಬೆನ್ನೂರು ಕಲಾವಿದರು ಸಿಎಂ ಬೊಮ್ಮಾಯಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರ ಗಿಫ್ಟ್ ಮಾಡಿದರು. ಈ ವರ್ಷ ಭೌತಿಕ ಮತ್ತು ಆನ್ಲೈನ್ ರೂಪದಲ್ಲಿ ಚಿತ್ರಸಂತೆ ನಡೆಸಲಾಗುತ್ತಿದೆ.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ತಂದೆಯವರ ಶತಮಾನೋತ್ಸವ ಇದೆ. ಅವರ ಪ್ರತಿಮೆ ಆಗಬೇಕು. ಎಸ್. ಆರ್ ಬೊಮ್ಮಾಯಿ ಅವರು ನನ್ನ ಗುರುವಾಗಿ ಈ ಮಾತನ್ನು ಹೇಳುತ್ತೇನೆ. ಈ ಬಾರಿ ನಾನು ಯಾವುದೇ ಬೇಡಿಕೆ ಸಿಎಂ ಮುಂದೆ ಇಡಲ್ಲ. ಯಾಕೆಂದರೆ ಕಲೆ ಆರಾಧಿಸುವ ಗುಣ ಅವರಲ್ಲಿ ಇದೆ. ಹೀಗಾಗಿ ಅವರೇ ಚಿತ್ರಕಲಾ ಪರಿಷತ್ ಅಭಿವೃದ್ಧಿಗೆ ಸಹಾಯ ಮಾಡ್ತಾರೆ ಎಂಬ ನಂಬಿಕೆ ಇದೆ ಎಂದರು.