ಬೆಂಗಳೂರು: ‘ಒಂದು ವೇಳೆ ಸೋಂಕು ಹೆಚ್ಚಳವಾದರೆ ಚಿಕಿತ್ಸೆಗೆ ಎಲ್ಲಾ ತಯಾರಿ ಹೊಂದಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವರ ವಿಡಿಯೋ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿ, ಕೊರೋನಾ ಸೋಂಕು ಚಿಕಿತ್ಸಾ ವ್ಯವಸ್ಥೆಗಳ ಸುಸ್ಥಿತಿಯನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಡಿ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್ ಸೇರಿದಂತೆ ಕೋವಿಡ್ ಉಪಕರಣಗಳು, ಸಿಬ್ಬಂದಿ, ವ್ಯವಸ್ಥೆಗಳು ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯ ವ್ಯವಸ್ಥೆ, ಪರಿಷ್ಕರಣೆ ಮಾಡಿಕೊಳ್ಳಲಾಗುವುದು ಎಂದರು.
ಕೊರೊನಾ ರೂಪಾಂತರ ತಳಿ ಬಿಎಫ್7 ಆರ್ ವ್ಯಾಲ್ಯೂ ಪ್ರಕಾರ, ಇದು ಒಬ್ಬ ವ್ಯಕ್ತಿಯಿಂದ 17-18 ಜನಕ್ಕೆ ಹರಡುವ ಸಾಮರ್ಥ್ಯ ಹೊಂದಿದೆ. ಸೋಂಕು ಪರೀಕ್ಷೆ, ಕಣ್ಗಾವಲು ಹೆಚ್ಚಿಸಲು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಹಿರಿಯರಿಗೆ ಪ್ರಾಶಸ್ತ್ಯ ನೀಡಿ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದರು.