ಬೆಂಗಳೂರು : ‘ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್ ಹೋಗುವುದಿಲ್ಲ. ಆದರೆ, ಕಾಂಗ್ರೆಸ್ ನ 40-45 ಜನರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಜೊತೆಯೇ 40-45 ಜನರು ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ಒಂದು ದಿನದ ಕೆಲಸ ಅಷ್ಟೇ. ಆದರೆ, ನಮಗೆ ಅದರ ಅವಶ್ಯಕತೆ ಇಲ್ಲ. ನಾವು ಸರ್ಕಾರ ಮಾಡಬೇಕಾಗಿಲ್ಲ ಎಂದರು.
ಇದನ್ನೂ ಓದಿ : ಸಭೆಗೆ ಗೈರಾಗಿದ್ದವರು ಮೊದಲೇ ಮಾಹಿತಿ ಕೊಟ್ಟಿದ್ದರು: ಬಿಜೆಪಿ ವಕ್ತಾರ ಎಂ.ಜಿ. ಮಹೇಶ್
ಮಗ-ಮಗಳನ್ನು ಮನೆಯಿಂದ ಹೊರಗೆ ಹಾಕ್ತೀರಾ? : ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಳಂಬದ ಕುರಿತು ಮಾತನಾಡಿದ ಸಂತೋಷ್, ನೇಮಕ ತಡವಾಗಿದೆ ಎನ್ನುವುದು ಗೊತ್ತು. ಸಂಘಟನಾ ಕಾರ್ಯದರ್ಶಿ ಆಗಿ ನನಗೆ ಹೆಚ್ಚು ಅರಿವಿದೆ. ನೇಮಕ ತಡವಾಗಿದೆ, ನೇಮಕ ಆಗುತ್ತದೆ. ನೇಮಕ ಆಗಿಲ್ಲ ಎನ್ನುವುದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯ ಏನಿದೆ? ಮನೆಯಲ್ಲಿ ಮದುವೆ ಆಗದ ಮಗಳು, ಕೆಲಸ ಸಿಗದ ಮಗ ಇದ್ದರೆ ಹೊರಗೆ ಹಾಕ್ತೀರ?. ತಡವಾಗಿದೆ ಎನ್ನುವುದು ಎಷ್ಟು ಸತ್ಯವೋ, ನೇಮಕ ಆಗುತ್ತದೆ ಎನ್ನುವುದೂ ಅಷ್ಟೇ ಸತ್ಯ ಎಂದರು.
ಬಾಂಬೆ ಬಾಯ್ಸ್ ಭೇದ-ಭಾವ ಬೇಡ : ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹಾರಿದವರು ಮತ್ತೆ ಕೈ ಹಿಡಿಯುತ್ತಾರೆ ಎಂಬ ಚರ್ಚೆಯ ನಡುವೆ ವಲಸೆ ನಾಯಕರ ಕುರಿತು ಮಾತನಾಡಿದ ಬಿ.ಎಲ್ ಸಂತೋಷ್, ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವರು ಪಕ್ಷಕ್ಕೆ ಬಂದಿದ್ದಾರೆ. ಈಗ ಅವರು ಕೂಡ ನಮ್ಮವರೆ. ಇಲ್ಲಿ ಹೊರಗಿನವರು, ಒಳಗಿನವರು ಎಂಬ ಭೇದ-ಭಾವವಿಲ್ಲ. ಕೆಲವರು ಪಕ್ಷ ಬಿಟ್ಟು ಹೋಗ್ತಾರೆ ಅಂತೆಲ್ಲ ಚರ್ಚೆಯಾಗುತ್ತಿದೆ. ಆದರೆ, ಅಂತಹ ಯಾವುದೂ ನಡೆಯುವುದಿಲ್ಲ. ಈ ಬಗ್ಗೆ ನಾಯಕರು ಯಾವುದೇ ಹೇಳಿಕೆ ನೀಡಬಾರದು. ಅವರು ಇದ್ದರೆ ಇರಲಿ, ಹೋದರೆ ಹೋಗಲಿ, ಪಕ್ಷಕ್ಕೆ ಏನು ನಷ್ಟ ಇಲ್ಲ ಎಂಬ ದಾಟಿಯಲ್ಲಿ ಹೇಳಿಕೆ ನೀಡಬಾರದು. ಇದು ಭಿನ್ನಮತಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಏನಾಗುತ್ತೆ ನೋಡಿ : ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿರುವುದಕ್ಕೆ ನಿರಾಸೆಯಾಗಬೇಡಿ. ಲೋಕಸಭಾ ಚುನಾವಣೆ ಬರ್ತಿದೆ. ಆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ. ಆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಎಂದು ಕಾದು ನೋಡಿ. ರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಆಯ್ಕೆ ವಿಳಂಬ ಆಗಿದೆ ನಿಜ. ಆದರೆ, ಅದರ ಬಗ್ಗೆ ನೀವು ತಲೆಕೆಡೆಸಿಕೊಳ್ಳಬೇಡಿ. ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದ್ದಾರೆ. ನೀವಂತೂ ಒಟ್ಟಾಗಿ ಪಕ್ಷದ ಕೆಲಸ ಮಾಡಿ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ಪಕ್ಷ ವಹಿಸಿದ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ಸಭೆಯಲ್ಲಿ ಪಕ್ಷದ ಮುಖಂಡಿರಿಗೆ ಬಿ.ಎಲ್ ಸಂತೋಷ್ ಕಿವಿಮಾತು ಹೇಳಿದರು.
ಸೆಪ್ಟೆಂಬರ್ 6 ರಿಂದ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ಮತ್ತು ಬೂತ್ ಗಳನ್ನು ಬಲಪಡಿಸಲು ಬಿಜೆಪಿ ನಾಯಕರಿಗೆ ಬಿ.ಎಲ್ ಸಂತೋಷ್ ಟಾಸ್ಕ್ ಕೊಟ್ಟಿದ್ದಾರೆ.
ಬಿ.ಎಲ್ ಸಂತೋಷ್ ನೇತೃತ್ವದ ಸಭೆ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ ಮಹೇಶ್, ಸಭೆಗೆ ಗೈರಾಗಿದವರು ಮೊದಲೇ ಮಾಹಿತಿ ಕೊಟ್ಟಿದ್ದಾರೆ. ಯಾರೂ ಉದ್ದೇಶಪೂರ್ವಕವಾಗಿ ಗೈರಾಗಿರಲಿಲ್ಲ. ಪೂರ್ವ ನಿಗದಿ ಕಾರ್ಯಕ್ರಮಗಳ ಹಿನ್ನೆಲೆ ಕೆಲವರು ಗೈರಾಗಿದ್ದಾರೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.