ಕಲಬುರಗಿ: ಕಲಬುರಗಿಯಲ್ಲಿ ಭಾನುವಾರ ನಡೆಯಲಿರುವ ಬಿಜೆಪಿ ಒಬಿಸಿ ಮೋರ್ಚಾ ಸಮಾವೇಶದಲ್ಲಿ ಸುಮಾರು 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರ ಪಕ್ಷದ ಹಿರಿಯ ಮುಖಂಡರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ವಿವಿಧ ಸಮುದಾಯಗಳ ಸಮಾವೇಶ ಪಕ್ಷ ನಡೆಸಲಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಐದು ತಂಡಗಳು ಕರ್ನಾಟಕ ಪ್ರವಾಸ ಕೈಗೊಂಡಿವೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ 250 ಕೋಟಿ ಬಿಡುಗಡೆ ಮಾಡಿದ್ದು, ಸಣ್ಣ ಸಮುದಾಯಗಳನ್ನು ಗುರುತಿಸಿ ಅವರ ಕಲ್ಯಾಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜ್ಯ ಬಿಜೆಪಿಯಿಂದ ಮುಂದಿನ ತಿಂಗಳಲ್ಲಿ ವಿವಿಧ ರೀತಿಯ ಜನ ಜಾಗೃತಿ ಸಮಾವೇಶಗಳನ್ನು ಬೇರೆ ಬೇರೆ ಕಡೆ ನಡೆಸಲಾಗುತ್ತಿದೆ, ನವಭಾರತ ನಿರ್ಮಾಣಕ್ಕೆ ನವ ಕರ್ನಾಟಕದ ಸಿದ್ದತೆ ಎಂಬ ಪರಿಕಲ್ಪನೆಯೊಂದಿಗೆ ರಾಜ್ಯಾದ್ಯಂತ ಎಲ್ಲ ಸಮುದಾಯ ಎಲ್ಲ ವ್ಯಕ್ತಿಗಳನ್ನು ಜೋಡಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.