ಬೆಂಗಳೂರು : ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಮುಂದಿನ ವಿಚಾರಣೆಯನ್ನು ಮಾರ್ಚ್ 27 ಕ್ಕೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಸಿಜೆಐ ಚಂದ್ರಚೂಡ್ ಪೀಠದ ಮುಂದೆ ಒಕ್ಕೂಟದ ವಕೀಲರಿಂದ ಪ್ರಸ್ತಾಪ ಇಡಲಾಯ್ತು. ಈ ವೇಳೆ ಮಾರ್ಚ್ 27 ರಂದು ವಿಚಾರಣೆ ಮಾಡೋದಾಗಿ ಪೀಠ ತಿಳಿಸಿದೆ. 18 ಲಕ್ಷ ಮಕ್ಕಳ ಭವಿಷ್ಯದ ಜೊತೆ ಕರ್ನಾಟಕ ಸರ್ಕಾರ ಆಟವಾಡುತ್ತಿದೆ ಎಂದು ವಕೀಲರು ವಾದ ವ್ಯಕ್ತಪಡಿಸಿದ್ದಾರೆ.
ರಾಜ್ಯ ಪಠ್ಯಕ್ರಮವಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ಸೂಚಿಸಿತ್ತು. ಮಾ.27ರಿಂದ ಪರೀಕ್ಷೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಿತ್ತು. ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರವು ಪೋಷಕರು ಮತ್ತು ಶಾಲೆಗಳ ಜೊತೆಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಖಾಸಗಿ ಶಾಲೆಗಳ ಸಂಘದ ಪರ ವಕೀಲರು ವಾದಿಸಿದರು.
ಈ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಾರ್ಚ್ 27 ರಂದು ವಿಚಾರಣೆಯನ್ನು ನಡೆಸಲಾಗುವುದು ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ವಕೀಲರು ಮಾರ್ಚ್ 27ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಹೀಗಾಗಿ ಈ ದಿನಾಂಕದ ಮುನ್ನ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ರು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಾರ್ಚ್ 27 ರಂದೇ ನಿಮ್ಮ ಅಭಿಪ್ರಾಯ ಕೇಳುತ್ತೇವೆ ಎಂದು ಹೇಳಿ ವಿಚಾರಣೆಯನ್ನು ಮಾರ್ಚ್ 27 ನಡೆಸಲಾಗುವುದು ಎಂದು ತಿಳಿಸಿದರು.