Sunday, October 1, 2023
spot_img
- Advertisement -spot_img

ಕಾಂಗ್ರೆಸ್‌ ಯೋಜನೆಗಳ ಮೆಚ್ಚಿ, ಸಿಎಂಗೆ ಪತ್ರ ಬರೆದ ವಿದ್ಯಾರ್ಥಿನಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿ ಧಾರವಾಡ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಕೃತಜ್ಞತೆಗಳನ್ನು ತಿಳಿಸಿದ್ದಾಳೆ.

ಧಾರವಾಡದ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕುಂಕೂರಿನ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆಶಾ ನೆಹರು ಪಾಟೀಲ್‌ ಎಂಬ ಬಾಲಕಿ ಸಿಎಂಗೆ ಪತ್ರ ಬರೆದಿದ್ದು, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ನಿಮಗೆ ಅಭಿನಂದನೆಗಳು. ನೀವು ಜಾರಿಗೆ ತಂದಂತಹ ಯೋಜನೆಗಳು ರಾಜ್ಯಕ್ಕೆ ವರದಾನವಾಗಿವೆ. ಅದರಲ್ಲೂ ಕ್ಷೀರಭಾಗ್ಯ, ಶೂಭಾಗ್ಯ, ಮೊಟ್ಟೆ ವಿತರಣೆ ಕಾರ್ಯಕ್ರಮಗಳಿಂದ ನನಗೂ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಶ್ಲಾಘಿಸಿದ್ದಾಳೆ.

ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ: ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿನಿ ಬರೆದಿರುವ ಪತ್ರದಲ್ಲಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ತಾವು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ಸಲಹೆ ನೀಡಿದ್ದಾಳೆ.

ನಿಮ್ಮನ್ನು ನೇರವಾಗಿ ನೋಡಬೇಕು: ವಿದ್ಯಾರ್ಥಿನಿಯು ಸಿದ್ದರಾಮಯ್ಯ ಅವರಲ್ಲಿ ಮತ್ತೊಂದು ಬೇಡಿಕೆ ಇಟ್ಟಿದ್ದು, ತಮ್ಮನ್ನು ಸ್ವತಃ ನೇರವಾಗಿ ನೋಡಬೇಕೆಂಬ ಅಭಿಲಾಷೆ ಇದ್ದು, ನಮ್ಮ ಭಾಗದ ಕಡೆ ಬಂದಾಗ ತಾವು ಅವಕಾಶ ನೀಡಿದರೆ ನನ್ನ ಸಹಪಾಠಿಗಳೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದಾಳೆ.

ಇದನ್ನೂ ಓದಿ: ಜಾತಿ ವ್ಯವಸ್ಥೆ ನಾಶವಾಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ: ಸಿಎಂ

ಬಾಲಕಿ ಪತ್ರದಿಂದ ಯೋಜನೆ ಸಾರ್ಥಕ: ಸಿಎಂ

ಇನ್ನು ಬಾಲಕಿಯ ಪತ್ರಕ್ಕೆ ಹರುಷ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ನಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ನಾಡಿನ ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಈ ಮೊದಲು 1 ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ನಮ್ಮ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ ಎಂದಿದ್ದಾರೆ.

ನಮ್ಮ ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಪುಟ್ಟ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ತಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ.

ಪುಟ್ಟ ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿತು. ಇಂಥಹ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ‌ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಶಾಂತಿ, ಸೌಹಾರ್ದತೆಯ ಸಮೃದ್ಧ ಕರ್ನಾಟಕ ನಿರ್ಮಾಣದ ನನ್ನ ಸಂಕಲ್ಪಕ್ಕೆ ಈ ದಿನ ಇನ್ನಷ್ಟು ಬಲ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles