ಶಿವಮೊಗ್ಗ: ವಿಮಾನಯಾನ ಆರಂಭದಿಂದ ಶಿವಮೊಗ್ಗದಲ್ಲಿ ಅಭಿವೃದ್ದಿಯ ವಿನೂತನ ಅಧ್ಯಾಯ ಆರಂಭವಾಗಿದೆ ಎಂದು ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸೋಗಾನೆಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಕಾರ್ಯಾಚರಣೆ , ಅಧಿಕೃತ ಜಾಲತಾಣ ಉದ್ಘಾಟಿಸಿ ಮಾತನಾಡಿದರು. ಇದು ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು, ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಸಂತಸ ಹಂಚಿಕೊಂಡರು.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ಮೂಲಕ ಮಲೆನಾಡು ಮತ್ತು ಮಧ್ಯಮ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಆಗಲಿದೆ ಎಂದರು.
ಇದನ್ನೂ ಓದಿ : ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ! ಬಿ ಎಲ್ ಸಂತೋಷ್ ಸಭೆಗೆ ಹಲವರು ಗೈರು
ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ- ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ ₹500 ರಾಜ್ಯ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ಸಚಿವರು ಘೋಷಿಸಿದರು. 779 ಎಕರೆ ವಿಸ್ತಾರದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ಮೂಲಯೋಜನೆಯ ವಿನ್ಯಾಸವನ್ನು ಪರಿಷ್ಕರಿಸಿ, ಸದ್ಯಕ್ಕೆ ಇಲ್ಲಿಂದ ಬೆಂಗಳೂರಿಗೆ ಕನೆಕ್ಟಿಂಗ್ ವಿಮಾನಯಾನ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿನಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ತೆರಳಲಿರುವ ಇಂಡಿಗೋ ಸಂಸ್ಥೆಯ ವಿಮಾನಗಳ ಮೂಲಕ ಪ್ರಯಾಣ ಮುಂದುವರಿಸಬಹುದು. ಉಡಾನ್ ಯೋಜನೆಯಡಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ನಾನಾ ನಗರಗಳಿಗೆ ಇಲ್ಲಿಂದ ನೇರ ವಿಮಾನಯಾನ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಇವತ್ತು ಐತಿಹಾಸಿಕ ದಿನ, ಪ್ರಥಮ ವಿಮಾನ ಇವತ್ತು ಇಳಿದು ಮತ್ತೆ ವಾಪಸ್ಸು ಬಂದಿರೋದು, ಜನರು ತುಂಬಾ ಖುಷಿಯಾಗಿದ್ದಾರೆ, ಈಗಾಗಲೇ ಒಂದು ತಿಂಗಳಿಗೆ ಟಿಕೆಟ್ ಬುಕ್ಕಿಂಗ್ ಆಗಿದೆ, ಇದು ಶಿವಮೊಗ್ಗ ಮತ್ತು ಸುಮಾರು 200 ಕಿ ಮೀ ಸುತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿದೆ, ಬಹಳ ಖುಷಿಯಿಂದ ಜನ ನಮ್ಮನ್ನೆಲ್ಲಾ ಸ್ವಾಗತ ಮಾಡಿದ್ದಾರೆ, ವಿಮಾನದಲ್ಲೂ ಕೂಡ ಜನರು ಬಹಳ ಸಂತೋಷದಿಂದ ಇದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಮಧುಬಂಗಾರಪ್ಪ ನೇತೃತ್ವದಲ್ಲಿ ಒಂದು ಚಿಕ್ಕ ಕಾರ್ಯಕ್ರಮ ಆಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೂ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಜಲ ಸಂಪನ್ಮೂಲ ಸಚಿವರು ಈಗಾಗಲೇ ದೆಹಲಿಗೆ ತೆರಳಿ ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದಾರೆ, ನೀರು ಬಿಡುವ ವಿಚಾರವಾಗಿ ವೈಜ್ಞಾನಿಕವಾಗಿ ಸೂತ್ರ ಆಗಬೇಕಿದೆ, ಸ್ವಾಭಾವಿಕವಾಗಿ ತಮಿಳುನಾಡಿಗೆ 172 ಟಿಎಂಸಿ ನೀರನ್ನು ಕೊಡುತ್ತೇವೆ, ನೀರಿನ ಲಭ್ಯತೆ ಎಷ್ಟಿದೆ, ಎಷ್ಟು ನೀರು ಹರಿದು ಹೋಗಿದೆ, ಅವರ ಡ್ಯಾಂನಲ್ಲಿ ನೀರಿನ ಲಭ್ಯತೆ ಎಷ್ಟಿದೆ, ಇವೆಲ್ಲ ನೋಡಿಕೊಂಡು ಸಂಕಷ್ಟ ಸೂತ್ರ ರೆಡಿಯಾಗಬೇಕು. ಕೇಂದ್ರ ಸರ್ಕಾರ ಕೂಡ ಮಧ್ಯಸ್ಥಿಕೆ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.