ನವದೆಹಲಿ : ಪ್ರತಿ ಮೂರು ತಿಂಗಳಿಗೊಮ್ಮೆ ಚುನಾವಣೆ ನಡೆಯಬೇಕು. ಏಕೆಂದರೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಗೆ ಬಂದರೆ ಬಿಜೆಪಿ ನಾಯಕರು ಐದು ವರ್ಷಗಳವರೆಗೆ ತಮ್ಮ ಮುಖವನ್ನು ಜನರಿಗೆ ತೋರಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ಯಿಂದ ಸಾಮಾನ್ಯ ವ್ಯಕ್ತಿಗೆ ಏನು ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ನೂರು ಅಥವಾ ಸಾವಿರ ಚುನಾವಣೆಗಳನ್ನು ನಡೆಸಿ, ನಮಗೆ ಏನು ಸಿಗುತ್ತದೆ ಎನ್ನುವ ಮೂಲಕ ಕೇಂದ್ರದ ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಜೊತೆ ಶರ್ಮಿಳಾರ ವೈಎಸ್‌ಆರ್ ಪಕ್ಷ ವಿಲೀನ?
ಈ ದೇಶಕ್ಕೆ ಯಾವುದು ಮುಖ್ಯ? ಒನ್ ನೇಷನ್, ಒನ್ ಎಲೆಕ್ಷನ್ ಅಥವಾ ಒನ್ ನೇಷನ್, ಒನ್ ಎಜುಕೇಶನ್ (ಶ್ರೀಮಂತ ಅಥವಾ ಬಡವ, ಎಲ್ಲರಿಗೂ ಸಮಾನವಾದ ಉತ್ತಮ ಶಿಕ್ಷಣ) ಒನ್ ನೇಷನ್ ಒನ್ ಟ್ರೀಟ್ಮೆಂಟ್ (ಶ್ರೀಮಂತ ಅಥವಾ ಬಡವ, ಎಲ್ಲರಿಗೂ ಏಕರೀತಿಯ ಚಿಕಿತ್ಸೆ) ಒನ್ ನೇಷನ್ ಒನ್ ಎಲೆಕ್ಷನ್ ನಿಂದ ಜನಸಾಮಾನ್ಯರಿಗೆ ಏನು ಸಿಗುತ್ತದೆ? ಎಂದು ಅವರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಒಂದು ವೇಳೆ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಯಾದರೆ ಬಿಜೆಪಿ ಐದು ವರ್ಷಗಳ ಕಾಲ ಜನರೆದುರು ಬಂದು ಮುಖ ತೋರಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಏನಿದು ಒನ್ ನೇಷನ್, ಒನ್ ಎಲೆಕ್ಷನ್..?
ಕೇಂದ್ರ ಸರ್ಕಾರ ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಒಂದು ರಾಷ್ಟ್ರ ಒಂದು ಚುನಾವಣೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಲಾಗಿದೆ. ದೇಶದಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಒಂದೇ ಭಾರಿ ಚುನಾವಣೆ ನಡೆಸುವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ ಈ ಸಮಿತಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.
ಇದನ್ನೂ ಓದಿ : ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಮಹದೇವಪ್ಪ
ಇದೊಂದು ಚುನಾವಣಾ ಕ್ರಮಗಳಲ್ಲಿ ನೂತನ ಪದ್ದತಿಯಲ್ಲದಿದ್ದರೂ, ಈ ಮೊದಲು ಸಂವಿಧಾನದ ರಚನೆಯ ಅಂದರೆ 1950ರ ಬಳಿಕ 1951ರಿಂದ 1967ರವರೆಗೆ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದ್ದವು. ಬದಲಾದ ಕಾಲದಲ್ಲಿ ಹೊಸ ರಾಜ್ಯಗಳು ರಚನೆಯಾದ ಬೆನ್ನಲ್ಲೆ ಬೇರೆ ಬೇರೆ ಸಮಯದಲ್ಲಿ ಚುನಾವಣೆಗಳು ಮುಂದುವರಿದವು.
ಅಲ್ಲದೆ 1983ರಲ್ಲಿಯೇ ಚುನಾವಣಾ ಆಯೋಗ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ನೀಡಿತ್ತು. ಬಳಿಕ ಕಾನೂನು ಆಯೋಗವು 1999ರಲ್ಲಿ ಸಲಹೆ ನೀಡಿತ್ತು. ನಂತರ 2104ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತರ್ವದ ಸರ್ಕಾರದಲ್ಲಿ ಈ ಕುರಿತು ಚಿಂತನೆ ನಡೆದಿತ್ತು.
ಇಡೀ ರಾಷ್ಟ್ರದಾದ್ಯಂತ ಒಂದೇ ಸಮಯದಲ್ಲಿ ಎಲ್ಲ ಚುನಾವಣೆಗಳನ್ನು ನಡೆಸಿ, ಹಣ ಹಾಗೂ ಸಮಯದ ಜೊತೆಗೆ ಅಭಿವೃದ್ದಿಗೆ ವೇಗ ನೀಡುವುದು ಕೇಂದ್ರ ಯೋಚನೆಯಾಗಿದೆ. ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯ ಸಾಧ್ಯತೆ ಇದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.