Monday, December 4, 2023
spot_img
- Advertisement -spot_img

Mukhyamantri Chandru : ಕಾವೇರಿ ಹೋರಾಟಕ್ಕೆ ಬಾರದ ಸ್ಯಾಂಡಲ್‌ವುಡ್ ಮಂದಿಯ ವಿರುದ್ಧ ಗುಡುಗಿದ ಮುಖ್ಯಮಂತ್ರಿ ಚಂದ್ರು

ಮಂಡ್ಯ : ಚಿತ್ರರಂಗದವರು ನಾವೇ ಬೇರೆ, ಜನರೆ ಬೇರೆ ಎನ್ನಬಾರದು. ಸಿನಿಮಾ ರಂಗದವರು ಬದುಕುತ್ತಿರುವುದು ಜನರ ತೆರಿಗೆ ಹಣದಿಂದ. ನಾವು ಸುಖವಾಗಿ ಇದ್ದೀವಿ ಎಂದರೆ ಅದಕ್ಕೆ ನಮ್ಮ ಜನರೇ ಕಾರಣ. ಅವರಿಗೆ ಧಕ್ಕೆ ಆದಾಗ ನಾವು ಬೆಂಬಲವಾಗಿ ನಿಲ್ಲಬೇಕಿರುವುದು ನಮ್ಮ ಕರ್ತವ್ಯ ಎಂದು ಆಪ್‌ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿನಿಮಾದವರು ಎಲ್ಲ ದಿನಗಳಲ್ಲೂ ಬಂದು ಹೋರಾಟ ಮಾಡಬೇಕು ಎಂದು ಇಲ್ಲ. ಕಾವೇರಿ ಹೋರಾಟಕ್ಕೆ ಬೆಂಬಲವನ್ನಾದರೂ ನೀಡಬೇಕು. ಈ ವಿಚಾರಕ್ಕೆ ಸ್ಪಂದಿಸದೆ ಇದ್ದರೆ ಅದಕ್ಕಿಂತ ದೊಡ್ಡ ವಿಚಾರ ಇನ್ನೊಂದಿಲ್ಲ, ಕಾವೇರಿ ನದಿ ನೀರಿನ ವಿಚಾರದಲ್ಲಿ ಚಿತ್ರರಂಗ ಧ್ವನಿ ಎತ್ತದೇ ಇರುವುದು ಬೇಜವಾಬ್ದಾರಿತನವಾಗಿದೆ ಎಂದು ಕಿಡಿ ಕಾರಿದರು.

ಸ್ಥಳೀಯ ಎಂಪಿ ಚಿತ್ರರಂಗದಲ್ಲಿ ಇದ್ದುಕೊಂಡು ಅವರೇ ಹೋರಾಟಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಧಿಕಾರಕ್ಕಾಗಿ ಅವರು ಎಲ್ಲೆಲ್ಲೋ‌ ಓಡಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಮನುಕುಲದ ಕಲ್ಯಾಣಕ್ಕಾಗಿ ನಮ್ಮ ಪ್ರಯತ್ನ ಮುಂದುವರಿಯಲಿದೆ : ಪ್ರಧಾನಿ ಮೋದಿ

ನಮಗೆ ಏನು ತೊಂದರೆ ಆಗಿಲ್ಲ, ಇನ್ನೊಬ್ಬರ ಸಮಸ್ಯೆ ಅವರಿಗೆ ಗೊತ್ತಿಲ್ಲ. ನಟ-ನಟಿಯರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಅವರಿಗೆ ಗದ್ದೆ, ಜಾನುವಾರುಗಳ ತೊಂದರೆ ಇಲ್ಲ. ಅದಕ್ಕಾಗಿ ಅವರಲ್ಲಿ ಉದಾಸೀನ ಮನೋಭಾವ ಆವರಿಸಿದೆ. ಸಿನಿಮಾರಂಗ ನೆಲ, ಜಲ, ಭಾಷೆಯ ವಿಚಾರಕ್ಕೆ ತೊಂದರೆ ಆದಾಗ ಮೊದಲು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಇನ್ನು ಮುಂದಾದರು ಕಾವೇರಿ ಹೋರಾಟಕ್ಕೆ ಸಿನಿಮಾ ರಂಗ ಬೆಂಬಲ ನೀಡಬೇಕು. ಸುಪ್ರೀಂಕೋರ್ಟ್‌ಗೆ ಈ ಸರ್ಕಾರ ಮೊದಲೆ ಅರ್ಜಿ ಹಾಕಬೇಕಾಗಿತ್ತು. ಅಧಿಕಾರದ ಅಮಲಿನಿಂದ ಸ್ವಾರ್ಥ ರಾಜಕೀಯಕ್ಕೆ ಇಳಿದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೂ ನ್ಯಾಯ ಬೇಕು. ಎಂಪಿಗಳೂ ಸಹ ಈ ಬಗ್ಗೆ ಧ್ವನಿ ಎತ್ತ ಬೇಕು. ತಮಿಳುನಾಡು ರಾಜಕೀಯವಾಗಿ ಒತ್ತಡ ಹಾಕುತ್ತಿದೆ. ನಮ್ಮ ರಾಜ್ಯದ ಸಂಸದರು ಗುಲಾಮಗಿರಿಯಲ್ಲಿ ಇದ್ದಾರೆ ಎಂದು ಲೇವಡಿ ಮಾಡಿದರು.

ಕೋರ್ಟ್‌ನಿಂದ ಈ ವಿಷಯವನ್ನು ಹೊರಗೆ ತರಬೇಕು. ದೇಶದ ರಾಜ್ಯಗಳು ತಮಿಳುನಾಡು, ‌ಕರ್ನಾಟಕ, ಒಂದು ರಾಜ್ಯಕ್ಕೆ ಬೆಣ್ಣೆ-ಇನ್ನೊಂದು ರಾಜ್ಯಕ್ಕೆ ಸುಣ್ಣ ಎಂಬಂತಾಗಿದೆ. ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದವರು ಹೋರಾಟ ಮಾಡಲು ಸಿದ್ದರಿಲ್ಲ. ಅದಕ್ಕಾಗಿ ಸೆಪ್ಟೆಂಬರ್ 11ಕ್ಕೆ ವಿಚಾರಣೆ ಮುಂದೂಡಿ ಎಂದು ಸರ್ಕಾರ ವಕೀಲರಿಂದ ಈ ರೀತಿ ಹೇಳಿಸಿದ್ದಾರೆ ಎಂದೆನಿಸುತ್ತಿದೆ. ಜನರಿಗೆ ಕಾವೇರಿ ವಿಚಾರದಲ್ಲಿ ಅನ್ಯಾಯವಾಗುತ್ತದೆ ಎಂದು ಚಿತ್ರರಂಗ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles