ಬೆಂಗಳೂರು: ನಟ , ರಾಜಕಾರಣಿ ದಿ. ಅಂಬರೀಷ್ , ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್‌ರ ವಿವಾಹ ದಿನಾಂಕ ನಿಗದಿ ಮಾಡಲಾಗಿದೆ.
ಜೂನ್ 7ರಂದು ಮಂಡ್ಯದಲ್ಲಿ ಆರತಕ್ಷತೆ, ಬೀಗರ ಊಟ ಕಾರ್ಯಕ್ರಮ ಆಯೋಜನೆಯಾಗಿದ್ದು, ಈ ವೇಳೆ 10ರಿಂದ 15 ಸಾವಿರ ಅತಿಥಿಗಳು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಅಭಿಷೇಕ್ ಮತ್ತು ಅವಿವಾ ವಿವಾಹ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ಜೂನ್ 5ರಂದು ವಿವಾಹ ನಡೆಯಲಿದ್ದು, ರಾಜಕಾರಣಿಗಳು, ಸಿನೆಮಾ ಗಣ್ಯರು ಭಾಗವಹಿಸಲಿದ್ದಾರೆ. ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್ ಮತ್ತು ಅವಿವಾ ಪರಿಚಯವಾಗಿತ್ತು.ಅಭಿಷೇಕ್ ಅಂಬರೀಶ್ ಸದ್ಯ ಕನ್ನಡ ಚಲನಚಿತ್ರದಲ್ಲಿ ನಟನಾಗಿ ಗುರುತಿಸಿಕೊಂಡಿದ್ದರೆ, ಅವಿವಾ ಬಿದ್ದಪ್ಪ ಫ್ಯಾಷನ್ ಡಿಸೈನರ್ ಆಗಿದ್ದಾರೆ.
ಅವಿವಾ ತಂದೆ ಪ್ರಸಾದ್ ಬಿದ್ದಪ್ಪ ಕೂಡ ಖ್ಯಾತ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಏಪ್ರಿಲ್ 5ರಂದು ಅಭಿಷೇಕ್ ಹಾಗೂ ತಾಯಿ ಸುಮಲತಾ ಅಂಬರೀಷ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದರು. ಇದನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.