ಚೆನ್ನೈ: ಸನಾತನ ಧರ್ಮ ಕುರಿತ ಟೀಕೆಯಿಂದಾಗಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ. ಹಿಂದಿ ಭಾರತವನ್ನು ಒಗ್ಗೂಡಿಸುತ್ತದೆ ಎಂಬುದು ಅಸಂಬದ್ಧ ಎಂದು ಹಿಂದಿ ದಿವಸ್ ಹಿನ್ನೆಲೆ ಅಮಿತ್ ಶಾ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಗುರುವಾರದಂದು “ಹಿಂದಿ ದಿವಸ” ಆಚರಣೆ ವೇಳೆ ಮಾತನಾಡಿದ ಅಮಿತ್ ಶಾ, ಹಿಂದಿಯು ಭಾರತದ ಭಾಷೆಗಳ ವೈವಿಧ್ಯತೆಯನ್ನು ಒಗ್ಗೂಡಿಸುತ್ತದೆ ಮತ್ತು ವಿವಿಧ ಭಾರತೀಯ ಮತ್ತು ಜಾಗತಿಕ ಭಾಷೆಗಳು ಮತ್ತು ಉಪಭಾಷೆಗಳನ್ನು ಗೌರವಿಸುತ್ತದೆ ಎಂದಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಡಿಗ್ರಿ ಕೇಸ್; ಸಮನ್ಸ್ ಜಾರಿ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಜಾ
ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ ಮತ್ತು ಅದರ ಎಲ್ಲಾ ಭಾಷೆಗಳನ್ನು ಬಲಪಡಿಸುವ ಮೂಲಕ ಮಾತ್ರ ಪ್ರಬಲ ದೇಶವು ಹೊರಹೊಮ್ಮುತ್ತದೆ ಎಂದು ಗೃಹ ಸಚಿವರು ಹೇಳಿದ್ದರು.
ಅಮಿತ್ ಶಾ ಹೇಳಿಕೆಯನ್ನು ಟೀಕಿಸಿ ಟ್ವೀಟ್ (ಎಕ್ಸ್) ಮಾಡಿರುವ ಉದಯನಿಧಿ ಸ್ಟಾಲಿನ್, ‘ ಹಿಂದಿ ದೇಶದ ಜನರನ್ನು ಒಂದುಗೂಡಿಸುತ್ತದೆ – ಪ್ರಾದೇಶಿಕ ಭಾಷೆಗಳಿಗೆ ಅಧಿಕಾರ ನೀಡುತ್ತದೆ’ ಎಂದು ಕೇಂದ್ರ ಸಚಿವ ಅಮಿತ್ ಶಾ ಎಂದಿನಂತೆ ಹಿಂದಿ ಭಾಷೆಯ ಮೇಲಿನ ಪ್ರೀತಿಯನ್ನು ಧಾರೆ ಎರೆದಿದ್ದಾರೆ. ಕಲ್ಪನೆಯು ನೀವು ಹಿಂದಿಯನ್ನು ಕಲಿತರೆ, ಅಭಿವೃದ್ಧಿ ಹೊಂದಬಹುದು ಎಂದು ಹೇಳುವ ಪರ್ಯಾಯ ರೂಪವಾಗಿದೆ. ತಮಿಳುನಾಡಿನಲ್ಲಿ ತಮಿಳು – ಕೇರಳದಲ್ಲಿ ಮಲಯಾಳಂ. ಹಿಂದಿ ಈ ಎರಡು ರಾಜ್ಯಗಳನ್ನು ಎಲ್ಲಿ ಒಂದುಗೂಡಿಸುತ್ತದೆ? ಸಬಲೀಕರಣ ಎಲ್ಲಿಂದ ಬರುತ್ತದೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 2024ರ ಚುನಾವಣೆಗೆ ಜನಸೇನಾ-ಟಿಡಿಪಿ ಮೈತ್ರಿ; ಪವನ್ ಕಲ್ಯಾಣ್ ಘೋಷಣೆ
‘ಕೇವಲ 4-5 ರಾಜ್ಯದಲ್ಲಿ ಮಾತನಾಡುವ ಭಾಷೆ ಇಡೀ ದೇಶವನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಇದು ಅಸಂಬದ್ಧ. ಅಮಿತ್ ಶಾ ಹಿಂದಿಯನ್ನು ಬಿಟ್ಟು ಉಳಿದೆಲ್ಲಾ ಭಾಷೆಗಳನ್ನು ಪ್ರಾದೇಶಿಕ ಭಾಷೆ ಎಂದು ನಿಂದಿಸುವುದನ್ನು ನಿಲ್ಲಿಸಬೇಕು’ ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.