ಬೆಂಗಳೂರು: ಚಂದ್ರನ ಮೇಲೆ ಭಾರತ ಕಾಲಿಟ್ಟು ಹೊಸ ಇತಿಹಾಸ ಬರೆದಿದೆ. ಚಂದ್ರಯಾನ್-3 ಯಶಸ್ವಿ ಲ್ಯಾಂಡಿಂಗ್ ಮಾಡಿ ಇಡೀ ವಿಶ್ವದ ಗಮನ ಸೆಳೆದಿದೆ. ಈ ಐತಿಹಾಸಿಕ ಕ್ಷಣವನ್ನು ಹಲವರು ಕೊಂಡಾಡಿದ್ದಾರೆ. ಈ ನಡುವೆ ನಟ ಕಿಶೋರ್ ಸರ್ಕಾರದ ನಡೆ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಈ ಕುರಿತಂತೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ‘ಚಂದ್ರನ ದಕ್ಷಿಣ ದ್ರುವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ… ಹೆಮ್ಮೆಯಿದೆ , ಎದೆ ಬೀಗಿದೆ… ಆದರೆ ..
ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ. ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ … ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ… ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ… ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ’ ಎಂದಿದ್ದಾರೆ.
ಇದನ್ನೂ ಓದಿ: ಮುಂದಿನ ತಿಂಗಳಿನಿಂದ ತರಕಾರಿ ಬೆಲೆಗಳಲ್ಲಿ ಇಳಿಕೆ : ಶಕ್ತಿಕಾಂತ್ ದಾಸ್
‘ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಶ್ಮೀರದ ಜನತೆಯ ಚಿತ್ರ… ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ.. ಹೀಗೇ ನೂರಾರು..ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ… ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು…???’ ಎಂದು ಬರೆದುಕೊಂಡಿದ್ದಾರೆ.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.