ನವದೆಹಲಿ : ಲೋಕಸಭೆಯಿಂದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತು ರದ್ದುಪಡಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಅಧೀರ್ ರಂಜನ್ ಚೌಧರಿ ಅವರ ಅಮಾನತನ್ನು ಹಿಂಪಡೆದಿದೆ. ಬುಧವಾರ ಚೌಧರಿ ಸಮಿತಿಯ ಮುಂದೆ ಹಾಜರಾಗಿದ್ದರು. ಆ ನಂತರ ಸಮಿತಿಯು ಅಮಾನತು ವಾಪಸ್ ಪಡೆಯುವ ನಿರ್ಣಯ ಅಂಗೀಕರಿಸಿದೆ. ಈ ಸಂಬಂಧ ಸ್ಪೀಕರ್ ಕಚೇರಿಗೆ ಶಿಫಾರಸು ಮಾಡಲಿದೆ. ಸ್ಪೀಕರ್ ಒಪ್ಪಿದರೆ ಚೌಧರಿ ಅವರ ಅಮಾನತು ರದ್ದಾಗಲಿದೆ.
ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಂಸತ್ ನಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಚೌಧುರಿ ಅವರನ್ನು ಆಗಸ್ಟ್ 10ರಂದು ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು. ಮಣಿಪುರ ಹಿಂಸಾಚಾರದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನ ಖಂಡಿಸಿ ಚೌಧರಿ ಮಾತನಾಡಿದ್ದರು. ಮೋದಿಯವರನ್ನು ಪರಾರಿಯಾದ ಉದ್ಯಮಿ ನೀರವ್ ಮೋದಿ ಮತ್ತು ದೃತರಾಷ್ಟ್ರನಿಗೆ ಹೋಲಿಕೆ ಮಾಡಿ ಮಾತನಾಡಿದ್ದರು.
ನನಗೆ ಯಾರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದಿರುವ ಅಧೀರ್ ರಂಜನ್ ಚೌಧರಿ, ವಿಶೇಷಾಧಿಕಾರ ಸಮಿತಿಯ ಮುಂದೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ. ಬಿಜೆಪಿ ಸಂಸದ ಸುನಿಲ್ ಸಿಂಗ್ ಅಧ್ಯಕ್ಷತೆಯ ವಿಶೇಷಾಧಿಕಾರ ಸಮಿತಿಯು ಅಧೀರ್ ರಂಜನ್ ಚೌಧರಿಯಯವರ ಅಮಾನತು ಹಿಂಪಡೆಯುವ ಸಂಬಂಧ ಲೋಕಸಭೆ ಸ್ಪೀಕರ್ ಗೆ ಶಿಫಾರಸು ಮಾಡಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.