ನವದೆಹಲಿ: ಚಂದ್ರಯಾನ್-3 ಯಶಸ್ವಿಯಾದ ಬಳಿಕ ಇಸ್ರೋ ಇದೀಗ ‘ಸೂರ್ಯಯಾನ್’ ಯೋಜನೆಗೆ ದಿನಾಂಕ ನಿಗದಿ ಮಾಡಿದೆ. ಸೆಪ್ಟೆಂಬರ್ 2ರ 11:50ಕ್ಕೆ ಸರಿಯಾಗಿ ಆದಿತ್ಯ-L1 ಮಿಷನ್ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಆದಿತ್ಯ -L1 ಉಡಾವಣೆಯಾಗಲಿದೆ ಎಂದು ತಿಳಿಸಿದೆ. ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾಗಿದೆ. ಇದು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ನೆಲೆಗೊಳ್ಳಲಿದೆ. ಉಡಾವಣೆಯ ಬಳಿಕ L1 ಪಾಯಿಂಟ್‌ಗೆ ಪ್ರಯಾಣಿಸಲು ಸುಮಾರು 4 ತಿಂಗಳ ಕಾಲ ಸಮಯ ತೆಗೆದುಕೊಳ್ಳಲಿದೆ.
L1 ಸುತ್ತಲಿನ ಕಕ್ಷೆಯಿಂದ ಸೂರ್ಯನನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿರುವ ಆದಿತ್ಯ-L1 ಮಿಷನ್, ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳಾದ ಕರೋನವನ್ನು ವಿವಿಧ ತರಂಗಪಟ್ಟಿಗಳಲ್ಲಿ ವೀಕ್ಷಿಸಲು ಏಳು ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ. ಇದು ಸೌರ ಚಟುವಟಿಕೆಗಳನ್ನು ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅದರ ಪರಿಣಾಮವನ್ನು ವೀಕ್ಷಿಸಲು ಹೆಚ್ಚಿನ ಪ್ರಯೋಜನವನ್ನು ಒದಗಿಸಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.