ಹಾವೇರಿ: ಬಡ ಜನರ, ರೈತರ ಕಲ್ಯಾಣಕ್ಕಾಗಿ ಯೋಜನೆ ಮುಟ್ಟಿಸಿದಾಗ ಸುಭಿಕ್ಷ ಕ್ಷೇತ್ರ ಆಗಲಿದೆ ಎಂದು ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ಹೇಳಿದರು. ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಕನಕದಾಸರ ಪುಣ್ಯಭೂಮಿ, ಇದು ಪರಿವರ್ತನೆಯ ಭೂಮಿ. ಈ ಕಾರ್ಯಕ್ರಮ ಮಾಡುವುದರಿಂದ ಕ್ಷೇತ್ರದ ಮುಂದಿನ ಭವ್ಯ ಭವಿಷ್ಯ ಮತ್ತಷ್ಟು ಪ್ರಗತಿಯಾಗಲಿದೆ ಎಂದರು.
ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು ಎಂದು ವೇದಿಕೆಯಲ್ಲಿ ಕಣ್ಣೀರು ಹಾಕಿದರು.
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ ನಾಡಿನ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ರಾಜ್ಯದ ನಾನಾ ಕಡೆ ಹೋದಾಗ ಸಿಗುವ ಸ್ವಾಗತ ನೋಡಿದಾಗ ನೀವು ನೆನಪಾಗುತ್ತೀರಿ ಎಂದು ಸಿಎಂ ಭಾವುಕರಾಗಿ ಹೇಳಿದರು.
ಈ ಸ್ಥಾನ ಗೌರವ ನನಗೆ ಸಿಗಬೇಕಾದ್ದಲ್ಲ. ಕ್ಷೇತ್ರದ ಜನರಿಗೆ ಸಿಗಬೇಕಾಗಿದ್ದು ಎಂದು ಅನ್ನಿಸುತ್ತಿದೆ. ನಿಮ್ಮ ಪ್ರೀತಿ ನೆನಪಾಗುತ್ತದೆ. ಎಲ್ಲ ಗ್ರಾಮಗಳಿಗೆ ಅನೇಕ ಸಲ ಹೋಗಿದ್ದೇನೆ. ಆಗೆಲ್ಲ ನೀವು ರೊಟ್ಟಿ, ಬುತ್ತಿ, ಹೋಳಿಗೆ, ಸೀಕರಣಿಯನ್ನು ಉಣ್ಣಿಸಿದ್ದೀರಿ. ಎಷ್ಟೊಂದು ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ಅದರ ಮುಂದೆ ಎಷ್ಟು ಕೆಲಸ ಮಾಡಿದರೂ ಕಡಿಮೆ. ನಿಮ್ಮ ಋಣದಲ್ಲಿದ್ದೇನೆ ಎಂದು ತಿಳಿಸಿದರು.
ನನ್ನ ಕ್ಷೇತ್ರದಲ್ಲಿ ಪ್ರತಿಯೊಂದು ಮನೆಗೆ ನಳ ಕೊಡುವ ವ್ಯವಸ್ಥೆ ಆಗುತ್ತಲಿದೆ. ಪ್ರತಿ ಮನೆಗೆ ನೀರು ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಮಳೆಗೆ ಬಿದ್ದ ಮನೆಗಳಿಗೆ ಧನಸಹಾಯ ನೀಡುವ ಯೋಜನೆ ಮಾಡುತ್ತೇನೆ. ಮನೆ ಬಿದ್ದವರಿಗೆಲ್ಲರಿಗೂ ಮನೆಯನ್ನು ಕೊಡುತ್ತೇನೆ. 15 ದಿನದಲ್ಲಿ ನಾನೇ ಬಂದು ಎಲ್ಲರಿಗೂ ಮನೆ ಕೊಡುತ್ತೇನೆ ತಿಳಿಸಿದರು.