ನವದೆಹಲಿ : ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸೆಪ್ಟೆಂಬರ್ 12ರ ನಂತರ ನಿಲ್ಲಿಸಲಾಗುವುದು. ರಾಜ್ಯದಲ್ಲಿ ಭೀಕರ ಬರ ಆವರಿಸಿರುವುದರಿಂದ ನೀರನ್ನು ಬಿಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟಿಗೆ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ.
ಆಗಸ್ಟ್ 29ರಿಂದ ಸೆ 11ರ ವರೆಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಬಿಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮಾಡಿತ್ತು. ಅದರಂತೆ ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ ಪ್ರತಿ ದಿನ ನೀರು ಬಿಡುತ್ತಿದೆ. ಆದರೆ ಇದರಿಂದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ. ಹೀಗಾಗಿ 5ರಿಂದ 3 ಸಾವಿರಕ್ಕೆ ಇಳಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಈಗಾಗಲೇ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ‘ಕಾವೇರಿ’ಗಾಗಿ ಕಬ್ಬು ಚಳವಳಿ: ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಿಎಂ ಭೇಟಿ
ಕಾವೇರಿ ಹಾಗೂ ಕೃಷ್ಣಾ ನದಿ ತೀರದ ಪ್ರದೇಶಗಳು ಭೀಕರ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸೆ.12ರ ಬಳಿಕ ತಮಿಳುನಾಡಿಗೆ ನೀರನ್ನು ಬಿಡಲು ಕರ್ನಾಟಕ ಸರ್ಕಾರದಿಂದ ಸಾಧ್ಯವಿಲ್ಲ ಎಂಬ ಪ್ರಮಾಣ ಪತ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಕಾವೇರಿ ಕೊಳ್ಳ ಪ್ರದೇಶದಲ್ಲಿ ಶೇ 66ರಷ್ಟು ಮಳೆಯ ಅಭಾವ ಉಂಟಾಗಿದೆ. ಇದರಿಂದ ಜಲಾಶಯಗಳಿಗೆ ಒಳ ಹರಿವು ಅತ್ಯಂತ ಕಡಿಮೆಯಾಗಿದೆ. ಆದರೆ ಇಲ್ಲಿ ಶೇ 60.12ರಷ್ಟು ಮಳೆಯ ಕೊರತೆ ಇದೆ ಎಂದು ಮಂಡಳಿ ಅಂದಾಜಿಸಿದೆ. ಈ ಎರಡೂ ಪ್ರದೇಶಗಳಲ್ಲಿ ಗಂಭೀರ ಬರಗಾಲ ತಲೆದೋರುವ ಆತಂಕ ಕಾಡುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದನ್ವಯ ಆಗಸ್ಟ್ 29ರಿಂದ 3ರ ವರೆಗೆ 30 ಸಾವಿರ ಕ್ಯೂಸೆಕ್ ನೀರನ್ನು ಬಿಡಬೇಕಾಗಿತ್ತು. ಆದರೆ ಇಲ್ಲಿಯವರೆಗೆ 37,869 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಅಲ್ಲದೆ ರಾಜ್ಯದಿಂದ ಹೆಚ್ಚವರಿಯಾಗಿ 7,869 ಕ್ಯೂಸೆಕ್ ನೀರನ್ನು ಬಿಡಲಾಗಿದೆ, ಮುಂಬರುವ ದಿನಗಳಲ್ಲಿ ನೀರು ಬಿಡುವ ಪ್ರಮಾಣ ಹೊಂದಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಪಡೆದಿದೆ ಎಂದು ಸಿಂಗ್ ಉಲ್ಲೇಖಿಸಿದ್ದಾರೆ.
ಕಾವೇರಿ ಪ್ರದೇಶದಲ್ಲಿ ಬರುವ ನಾಲ್ಕು ಜಲಾಶಯಗಳಲ್ಲಿ 56 ಟಿಎಂಸಿ ಅಡಿ ನೀರಿದೆ, 40 ಟಿಎಂಸಿಷ್ಟು ನೀರು ಮಂಬರುವ ದಿನಗಳಲ್ಲಿ ಹರಿದು ಬರುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ. ರಾಜ್ಯಕ್ಕೆ 140 ಟಿಎಂಸಿ ಅಡಿಯಷ್ಟು ನೀರು ಕುಡಿಯಲು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿದ್ದು ಅದಕ್ಕಾಗಿ ಮುಂಚಿತವಾಗಿಯೇ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ರೈತ ಸಂಘದಿಂದ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದೂಡಿಕೆ..
ಕಾವೇರಿ ವಿವಾದದ ವಿಚಾರಣೆ ಮುಂದೂಡಿರೋದು ಭಾರಿ ಹಿನ್ನಡೆಯಾಗಿದೆ ಎಂದು ಕೆಆರ್‌ಎಸ್‌ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ.
ಕೆಆರ್‌ಎಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೆ.11 ಕ್ಕೆ ಅರ್ಜಿ ವಿಚಾರಣೆ ಆಗಿದ್ದರೆ ಏನೋ ಸುಧಾರಣೆ ಕಾಣಬಹುದು ಅಂದುಕೊಂಡಿದ್ದೇವು, ಈಗ ಸೆ.21ಕ್ಕೆ ಮುಂದೂಡಿರೋದು ತುಂಬಾ ಆತಂಕ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಮಹತ್ವದ ಕ್ಯಾಬಿನೆಟ್ ಸಭೆ; ಬರಪೀಡಿತ ತಾಲೂಕುಗಳ ಘೋಷಣೆ ಸಾಧ್ಯತೆ
ರೈತರ ಪರ ಸರ್ಕಾರ ಎಂದು ಹೇಳುತ್ತಿರುವ ಕಾಂಗ್ರೆಸ್ ಈಗ ದೃಢ ನಿರ್ಧಾರ ಮಾಡಬೇಕು, ಗಟ್ಟಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಅಭಿಪ್ರಾಯಪಟ್ಟರು. ಜನರು ನೀರು ಇಲ್ಲದೇ ಕಷ್ಟ ಅನುಭವಿಸಬೇಕಾಗುತ್ತದೆ, ಸರ್ಕಾರ ಬೆಳೆಗಳಿಗೆ ಪರಿಹಾರ ನೀಡುವ ಒತ್ತಡ ಸಹ ಬರುತ್ತದೆ, ಸೆ. 21ಕ್ಕೆ ಅರ್ಜಿ ವಿಚಾರಣೆ ಮಾಡ್ತಿರೋದು ದೊಡ್ಡ ಹಿನ್ನಡೆಯಾಗಿದೆ, ಈ ಬಗ್ಗೆ ಸಭೆ ನಡೆಸಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮಾತಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ತಮಿಳುನಾಡಿಗೆ ಹೋಗುತ್ತಿರೋ ನೀರನ್ನು ತಡೆಯಬೇಕು, ನೀರಿನ ವಿಚಾರವಾಗಿ ಬೇಗ ಅರ್ಜಿ ವಿಚಾರಣೆ ಮಾಡಲು ಕಾನೂನಿನಲ್ಲಿ ಏನು ಅವಕಾಶ ಇದೆ ಅನ್ನೋದನ್ನು ಸರ್ಕಾರ ಗಮನಿಸಬೇಕು, ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಬೇಕು, ಅಷ್ಟೇ ಅಲ್ಲದೇ ರೈತರ ಸಮಸ್ಯೆ ಅರ್ಥೈಸಿ ನಮಗೆ ಕುಡಿಯುವ ನೀರನ್ನು ಉಳಿಸಬೇಕು, ಈ ವಿಚಾರವಾಗಿ ಸದ್ಯದಲ್ಲೇ ರೈತ ಸಂಘದ ರೂಪುರೇಷೆಯನ್ನು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.