ಬೆಂಗಳೂರು: ‘ಎಲ್ಲ ದಲಿತ ಸಂಘಟನೆಗಳು ಒಗ್ಗಟ್ಟಾಗಿರಬೇಕು; ಒಟ್ಟಿಗೆ ಹೋರಾಟ ಮಾಡಿದ್ರೆ ಬಹಳ ಸಂತೋಷ. ವಿಷಯಾಧಾರಿತ ಹೋರಾಟ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ‘ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ’ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಮ್ಮ ಭಾಷಣದಲ್ಲಿ ಸಿದ್ದಲಿಂಗಯ್ಯ ಅವರ ಜನಪ್ರಿಯ ಹಾಡು ಪ್ರಸ್ತಾಪಿಸಿ, ‘ಯಾರಿಗೆ ಬಂತು, ಎಲ್ಲಿಗೆ ಬಂತು 47 ಸ್ವಾತಂತ್ರ್ಯ? ಸಂವಿಧಾನ ವಿರೋಧಿಗಳಿಗೆ ಕೊಟ್ರೆ ಹೇಗೆ ಸಿಗುತ್ತೆ ಸ್ವಾತಂತ್ರ್ಯ? ದಲಿತರಿಗೆ ಎಲ್ಲಿಂದ ಬರಬೇಕು ಸ್ವಾತಂತ್ರ್ಯ. ಅದಾನಿ, ಅಂಬಾನಿಗಳಿಗೆ ಅಷ್ಟೆ ಸ್ವಾತಂತ್ರ್ಯ’ ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
‘ದೇವರಾಜು ಅರಸು ಅವರು 8 ವರ್ಷ ಮುಖ್ಯಮಂತ್ರಿ ಆಗಿದ್ದರು, ಹಿಂದುಳಿದ, ದಲಿತರ ಪರ ಹೋರಾಟ ಮಾಡಿದರು. ಮೀಸಲಾತಿ ಇರಲಿಲ್ಲ, ಸಂವಿಧಾನಕ್ಕೆ ತಿದ್ದುಪಡಿ ಆದ್ಮೇಲೆ ಮೀಸಲಾತಿ ಬಂತು. ಆಯನೂರು ಆಯೋಗ ಜಾರಿ ಮಾಡುವಲ್ಲಿ ದೇವರಾಜು ಅರಸು ಕೊಡುಗೆ ಅಪಾರ, ಆಯನೂರು ಆಯೋಗದ ಮೂಲಕ ಹಿಂದುಳಿದ ವರ್ಗದವರಿಗೆ ಮೀಸಲಾತಿ ಸಿಕ್ಕಿತು. ಮಂಡಲ್ ಆಯೋಗದಿಂದ ಇಡೀ ದೇಶಕ್ಕೆ ಮೀಸಲಾತಿ ಸಿಕ್ತು’ ಎಂದು ವಿವರಿಸಿದರು.
‘2013-18ರವರೆಗೆ ಅವಧಿಯಲ್ಲಿ ಜಡತ್ವದಿಂದ ಕೂಡಿದ ಜಾತಿ ವ್ಯವಸ್ಥೆಗೆ ಚಲನೆ ಕೊಡುವ ನಿಟ್ಟಿನಲ್ಲಿ ಎಸ್‌ಸಿಪಿ-ಟಿಎಸ್‌ಪಿ ಜಾರಿಗೆ ತಂದ್ವಿ, ನಿಮ್ಮ ಮೀಸಲಾತಿ ನಿಮಗೆ ಸಿಗಬೇಕಲ್ವಾ? ಬೊಮ್ಮಾಯಿ ಮಂಡಿಸಿದ್ದು 3 ಲಕ್ಷದ 9 ಸಾವಿರ ಕೋಟಿ ರೂ. ಬಜೆಟ್. ನಾನು 3 ಲಕ್ಷದ 28 ಸಾವಿರ ಕೋಟಿ ರೂ. ಬಜೆಟ್ ಮಂಡಿಸಿದ್ದೇನೆ. ಬಿಜೆಪಿ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಹಣ ಇಡಲಿಲ್ಲ. ಅವರು ಹಣ ಇಟ್ಟಿದ್ರೆ, 40 ಸಾವಿರ ಕೋಟಿ ರೂ. ಬಜೆಟ್ ಮಂಡನೆ ಮಾಡುತ್ತಿದ್ದೆ. ಗ್ಯಾರೆಂಟಿಗಳಿಗೆ ಹಣವಿಟ್ಟು ಬಜೆಟ್ ಘೋಷಿಸಿದ್ದಾರೆ ಅಂತ ಬಿಜೆಪಿ ದೂಷಿಸಿತ್ತು. ಸುಮ್ಮನೆ ಅಪಪ್ರಚಾರ ಮಾಡಿದ್ರು’ ಎಂದರು.
‘ಮುಂದಿನ ಬಜೆಟ್ ಗೆ 2 ಸಾವಿರ ಕೋಟಿ ರೂ. ಹೆಚ್ಚುವರಿಗೆ ಮಾಡ್ತೀನಿ; ಗ್ಯಾರೆಂಟಿ ಜಾರಿಯಿಂದ ರಾಜ್ಯ ದಿವಾಳಿ ಆಗುತ್ತೆ ಅಂತ ಅವರು ಹಬ್ಬಿಸಿದ್ರು. ಮೋದಿ ಕೂಡ ಹೇಳಿದ್ರು, ಈಗ ದಿವಾಳಿ ಆಗೋಯ್ತಾ?. ಸಂವಿಧಾನ ಚೆನ್ನಾಗಿದೆ. ಆದರೆ, ಅದು ಯಾರ ಕೈಲಿರುತ್ತೆ ಅನ್ನೋದು ಮುಖ್ಯ. ಸಂವಿಧಾನ ಪರವಾಗಿ ಇರುವವರಿಗೆ ಅಧಿಕಾರ ಕೊಟ್ರೆ ಬದಲಾವಣೆ ಸಾಧ್ಯ. ಆ ಕೆಲಸವನ್ನ ದೇವರಾಜ್ ಅರಸು ಮಾಡಿದ್ರು, ಅದಕ್ಕಾಗಿಯೇ ನೀವೀಗ ಅವರನ್ನ ನೆನಪಿಸಿಕೊಳ್ತಿದ್ದೀರಾ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.