ಶಿವಮೊಗ್ಗ : ಮೈತ್ರಿ ಎಲ್ಲ ರಾಜಕೀಯ ಪಕ್ಷಗಳಿಗೂ ಅನಿವಾರ್ಯ ಹಾಗೂ ಅಗತ್ಯ ಎಂದು ಮಾಜಿ ಶಾಸಕ ವೈ.ಎಸ್. ವಿ ದತ್ತಾ ಹೇಳಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಯಾವುದೂ ಹೊರತಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಿತ್ತು, ಈಗ ಕಾಂಗ್ರೆಸ್ ಇನ್ನೊಂದು ಮಹಾಮೈತ್ರಿಕೂಟ ಮಾಡಿಕೊಂಡಿದ್ದಾರೆ ಅದಕ್ಕೆ ನಮ್ಮನ್ನು ಜೆಡಿಎಸ್ ಆಹ್ವಾನಿಸಿಲ್ಲ ಎಂದು ತಿಳಿಸಿದರು.
ಈಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸಾಧ್ಯತೆ ಇದೆ ಎಂಬ ಬಗ್ಗೆ ಚರ್ಚೆಯಾಗ್ತಿದೆ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಹೊಂದಾಣಿಕೆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ, ಈಗ ತೀರ್ಮಾನ ದೆಹಲಿಯಲ್ಲಿ ಆಗಬೇಕು, ಕುಮಾರಸ್ವಾಮಿ ದೆಹಲಿಗೆ ಹೋದ ನಂತರ ತೀರ್ಮಾನ ಆಗುತ್ತೆ, ಆ ರೀತಿಯ ಒಂದು ಚರ್ಚೆ ನಡೆದಿರುವುದಂತೂ ಸತ್ಯ ಎಂದರು.
ಇದನ್ನೂ ಓದಿ : 2024ರ ಚುನಾವಣೆಗೆ ಜನಸೇನಾ-ಟಿಡಿಪಿ ಮೈತ್ರಿ; ಪವನ್ ಕಲ್ಯಾಣ್ ಘೋಷಣೆ
ಜೆಡಿಎಸ್ ಯಾವಾಗಲೂ ಬಿಜೆಪಿ- ಕಾಂಗ್ರೆಸ್‌ನ್ನು ಒಂದು ಸಮಾನ ದೂರದಲ್ಲಿಟ್ಟು ಹೋರಾಡಿಕೊಂಡು ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಭಿನ್ನಾಭಿಪ್ರಾಯ ಮರೆತು ಹೋಗಬೇಕಾಗುತ್ತದೆ, ಅದು ಮೈತ್ರಿಯ ಧರ್ಮ ಕೂಡ ಹೌದು, ಅನುಕೂಲಕ್ಕೆ ತಕ್ಕ ರಾಜಕಾರಣ ನಡೀತಾ ಇದೆ, ಸಿದ್ಧಾಂತಗಳು ಕೂಡ ಆಹಾರ ಧಾನ್ಯದ ರೀತಿ ಕಲಬೆರಕೆಯಾಗಿದೆ ಎಂದರು.
ಕಾವೇರಿ ನೀರು ಹಂಚಿಕೆ ವಿವಾದವಾಗಿ ಮಾತನಾಡಿದ ಅವರು, ಸರ್ಕಾರ ಸ್ಪಷ್ಟವಾಗಿ ತೀರ್ಮಾನಿಸಬೇಕು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಬಿಡಬಾರದು,ಇದು ನಮ್ಮ ಪಕ್ಷದ ಸ್ಪಷ್ಟ ಅಭಿಪ್ರಾಯ ಕೂಡ ಹೌದು, ಜನತಾ ಪರಿವಾರವಿದ್ದ ಸಂದರ್ಭದಲ್ಲಿ ರಾಜ್ಯದ ನೆಲ,ಜಲ, ಭಾಷೆಯ ರಕ್ಷಣೆಗೆ ಒಗ್ಗಟ್ಟಾಗಿದ್ದರು, ಸಿದ್ದರಾಮಯ್ಯ 2005 ರ ವರೆಗೂ ಕೂಡ ಜನತಾ ಪರಿವಾರದ ಭಾಗವೇ ಆಗಿದ್ರು ಎಂದು ತಿಳಿಸಿದರು.
ದೇವೇಗೌಡರಿಗೂ ಕಾವೇರಿ ಅಂದರೆ ಅವಿನಾಭಾವ ಸಂಬಂಧ ಇತ್ತು ಕೂಡ ಮಾಡಿದ್ರು. ಕಾಂಗ್ರೆಸ್‌ಗೆ ಡಿಎಂಕೆ ಜೊತೆ ಮೈತ್ರಿ ಇದೆ, ಸ್ಟಾಲಿನ್ ಇದ್ದಾರೆ ರಾಷ್ಟ್ರೀಯ ಪಕ್ಷಗಳು ಎಲ್ಲವೂ ಹಂಗಿನಲ್ಲೇ ಇರುತ್ತವೆ. ಆದರೆ, ಜೆಡಿಎಸ್ ಗೆ ಅರಸನ ಅಂಕಿ ಇಲ್ಲ ದೆವ್ವದ ಕಾಟ ಇಲ್ಲ, ಎಲ್ಲಾ ಹೈಕಮಾಂಡ್ ಕರ್ನಾಟಕ ರಾಜ್ಯದಲ್ಲೇ ಇದೆ. ಆದರೆ, ಬಿಜೆಪಿ ಕಾಂಗ್ರೆಸ್ ಗೆ ಹಾಗಲ್ಲ, ಅವರಿಗೆ ದೆಹಲಿ ಹೈಕಮಾಂಡ್ ಇದೆ. ದೆಹಲಿಯ ಮರ್ಜಿಗೆ, ರಾಷ್ಟ್ರೀಯ ಮೈತ್ರಿಗೆ ಒಳಗಾಗದೇ ರಾಜ್ಯದ ಹಿತಾಸಕ್ತಿ ಕಾಪಾಡಬೇಕು. ಇದರಿಂದ ರಾಜಕ್ಕೆ ಕಾವೇರಿ ವಿಚಾರದಲ್ಲಿ ಪದೇಪದೇ ಅನ್ಯಾಯವಾಗ್ತಿದೆ ಎಂದು ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.