ಬೆಂಗಳೂರು : ಎಲೆಕ್ಷನ್ ಆಯೋಗದ ನಿರ್ದೆಶನದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ, ನಾಳೆ ರಾಜ್ಯದ ಗಡಿ ಭಾಗಗಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪ್ರಕ್ರಿಯೆಯಾಗಿದ್ದು, ನಾಳೆ ಎಲ್ಲರೂ ಸಹ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ. ಇಂದು ಹಾಗೂ ನಾಳೆ ರಾಜ್ಯ ಎಲ್ಲ ಚೆಕ್‌ಪೋಸ್ಟ್ ಗಳಲ್ಲಿ ಭಾರಿ ಭದ್ರತೆ ಇರಲಿದ್ದು, ಎಲ್ಲ ಎಸ್ ಪಿ, ಕಮೀಷನರ್ ಗಳು ಗಸ್ತು ತಿರುಗಲಿದ್ದಾರೆ, ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವವರನ್ನು ಪರಿಶೀಲನೆ ನಡೆಸಲಾಗುವುದು , ವಿನಾಕಾರಣ ಬೇರೆ ರಾಜ್ಯದಿಂದ ಬರುವಂತಿಲ್ಲ , ಸೂಕ್ತ ಕ್ರಮ ವಹಿಸಲಾಗಿದೆ ಯಾವುದೆ ನಕಲಿ ಮತದಾನ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿಯ ಚುನಾವಣೆಗೆ ರಾಜ್ಯದಾದ್ಯಂತ 2.2 ಲಕ್ಷ ಪೊಲೀಸರನ್ನು ಚುನಾವಣಾ ಭದ್ರತೆಗೆ ನಿಯೋಜಿಸಲಾಗಿದೆ. ವಿಧಾನಸಭೆ ಚುನಾವಣೆ ಮತದಾನಕ್ಕೆ 55,282 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅವುಗಳಿಗೆ ಪೊಲೀಸ್ ಸಿಬ್ಬಂದಿಯ ಜತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ.