ಬೆಂಗಳೂರು: ‘ಗೇಮ್ ಚೇಂಜರ್ಸ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ ನೇಮ್ ಚೇಂಜರ್ಸ್ ಆಗಿದೆ’ ಎಂದು ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ಕೊಟ್ಟಿರುವ ರಾಜ್ಯ ಬಿಜೆಪಿ, ‘ಸನ್ಮಾನ್ಯ ಪ್ರಿಯಾಂಕ್ ಖರ್ಗೆಯವರೇ, 60 ವರ್ಷಗಳ ಜಡ್ಡುಗಟ್ಟಿದ ಕಾಂಗ್ರೆಸ್ ಆಡಳಿತದಲ್ಲಿ ಗೇಮ್‌ಗಳೆಲ್ಲವೂ ಗಾಂಧಿ ಕುಟುಂಬದವರದ್ದಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತದಲ್ಲಿ ಎಲ್ಲವೂ ಭಾರತದ ಪರವಾಗಿವೆ’ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವು. 60 ಕೋಟಿಗೂ ಹೆಚ್ಚು ಭಾರತೀಯರ ಬಳಿ ಆಯುಷ್ಮಾನ್ ಕಾರ್ಡ್. ಜನ್ ಧನ್ ಮೂಲಕ 50 ಕೋಟಿಗೂ ಹೆಚ್ಚು ಭಾರತೀಯರಿಗೆ ಬ್ಯಾಂಕ್ ಖಾತೆ. ಉಜ್ವಲಾ ಯೋಜನೆಯಿಂದ 20 ಕೋಟಿಗೂ ಹೆಚ್ಚು ಹೊಗೆ ರಹಿತ ಅಡುಗೆ ಮನೆ. ಜಲಜೀವನ್ ಮಿಷನ್‌ನಿಂದ 10 ಕೋಟಿಗೂ ಹೆಚ್ಚು ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರು’ ಎಂದು ಹೇಳಿದೆ.
ಮುಂದುವರಿದು, ‘ವಿದೇಶಗಳಿಗೂ ಮಾದರಿಯಾದ ಪ್ರಧಾನಿ ಮೋದಿ ಅವರ ನಾಯಕತ್ವ. ಉಡಾನ್ ಯೋಜನೆಯಿಂದ ನಿಮ್ಮ ಕಲ್ಬುರ್ಗಿ ಜೊತೆ ದೇಶದ 200ಕ್ಕೂ ಅಧಿಕ ಕಡೆ ಹೊಸ ವಿಮಾನ ನಿಲ್ದಾಣ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ದೇಶದ ಪ್ರತಿಯೊಬ್ಬ ರೈತರಲ್ಲಿಯೂ ಮೂಡಿದೆ ಹೊಸ ಉತ್ಸಾಹ. ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಟಾರ್ಟ್ಅಪ್‌ಗಳು ಮತ್ತು ಯೂನಿಕಾರ್ನ್‌ಗಳು ಭಾರತದಲ್ಲಿವೆ. ಇಂತಹ ಇನ್ನೂ ನೂರಾರು ಗೇಮ್ ಚೇಂಜರ್‌ಗಳಿವೆ, ಜೊತೆಗೆ ಕೆಲ ನೇಮ್ ಚೆಂಜ್‌ಗಳು ಸಹ ಆಗಿವೆ’ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್‌ಗೆ ತಿರುಗೇಟು ಕೊಟ್ಟಿದೆ.
‘ಯು.ಪಿ.ಎ – I.N.D.I.A ಒಕ್ಕೂಟ, ರೌಲ್ ವಿನ್ಸಿ -ರಾಹುಲ್ ಗಾಂಧಿ, ಆಂಟೋನಿಯೋ ಮೈನೋ-ಸೋನಿಯಾ ಗಾಂಧಿ. ಅಂದ ಹಾಗೆ, ಕಾಂಗ್ರೆಸ್ ಪಕ್ಷ ದ್ವೇಷಿಸುವ ಭಾರತ ರತ್ನ ಡಾ. ಬಾಬಾಸಾಹೇಬರು ಬರೆದ ಭಾರತದ ಸಂವಿಧಾನವನ್ನೊಮ್ಮೆ ಅಧ್ಯಯನಿಸಿ, ‘India that is Bharat’ ಎಂಬುದನ್ನು ದಪ್ಪ ಅಕ್ಷರಗಳಲ್ಲಿಯೇ ಉಲ್ಲೇಖಿಸಲಾಗಿದೆ’ ಎಂದು ಹೇಳಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.