ಅಹಮದಾಬಾದ್ : ಕೊರೊನಾ ಸೊಂಕಿನ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಎಲ್ಲರೂ ಕೋವಿಡ್ -19 ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ರಾಹುಲ್ ಗಾಂಧಿ ರಹಸ್ಯವಾಗಿ ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣೆಯ ಪ್ರಚಾರದ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ಸಮಯದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಟ್ವೀಟ್ ಮೂಲಕ ಕೊವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಅದು ಮೋದಿ ಲಸಿಕೆ ಮತ್ತು ಅದರಿಂದ ನಿಮಗೆ ಹಾನಿಯಾಗುತ್ತದೆ ಎಂದು ಹೇಳುವ ಮೂಲಕ ಜನರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅದೃಷ್ಟವಶಾತ್, ಯಾರೂ ರಾಹುಲ್ ಗಾಂಧಿಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿದ್ದ ರಾಹುಲ್ ಗಾಂಧಿ ಗುಟ್ಟಾಗಿ ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು ಎಂದು ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯದಲ್ಲಿ ನಿರತರಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಜನರನ್ನು ಸುರಕ್ಷಿತವಾಗಿಡಲು ಶ್ರಮಿಸಿದರು ”ಎಂದು ಅಮಿತ್ ಶಾ ಹೇಳಿದ್ದಾರೆ.