ಬೆಂಗಳೂರು : ಕರ್ನಾಟಕ – ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದ ತಾರಕಕ್ಕೇರಿದ್ದು, ಉಭಯ ರಾಜ್ಯಗಳಲ್ಲಿ ಹೋರಾಟಗಾರರು ಬಸ್ ಗಳಿಗೆ ಮಸಿ ಬಳಿದು, ಕಲ್ಲು ಹೊಡೆಯುವ ಕುಕೃತ್ಯ ಘನನೆಗಳು ವರದಿಯಾಗಿವೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನು ಆರಂಭಿಸಿರುವ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟನಲ್ಲಿ ಪ್ರಕರಣ ದಾಖಲಿಸಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಡಿ.14 ಅಥವಾ ಡಿ.15ರಂದು ಸಭೆ ನಡೆಸಲು ಮುಂದಾಗಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಆರಂಭಿಸಿದ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳಲ್ಲಿ ಹಿಂಸಾಚಾರ ಆರಂಭವಾಗಲು ನೇರ ಕಾರಣವಾಗಿದೆ. ಆದರೆ, ಈಗ ಮಹಾರಾಷ್ಟ್ರ ವಿಕಾಸ್ ಅಘಾಡಿ ಸಂಸದರ ನಿಯೋಗವು ಇಂದು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಹಿಂಸಾಚಾರ ತಡೆಯುವಂತೆ ಮನವಿ ಮಾಡಿದೆ. ಈ ಘಟನೆಗಳ ಬಗ್ಗೆ ಮಾಹಿತಿ ಪಡೆದಿರುವ ಅಮಿತ್ ಶಾ ಡಿ.14ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಭೆಯನ್ನು ಅಮಿತ್ ಶಾ ಚರ್ಚೆಗೆ ಕರೆದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ. ಈ ಪ್ರಕರಣ ಸುಪ್ರೀಂ ಕೊರ್ಟ್ ನಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸೋಮವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.