ಬೆಂಗಳೂರು : ನಂದಿನಿ ಹಾಲಿನ ಅಸ್ತಿತ್ವಕ್ಕೆ ಧಕ್ಕೆ ಇಲ್ಲ. ಯಾವುದೇ ಕಾರಣಕ್ಕೂ ಅಮೂಲ್ ಜೊತೆ ವಿಲೀನ ಮಾಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಮಾಡುತ್ತಿರುವ ಆರೋಪ ಸುಳ್ಳು. ನಂದಿನಿ- ಅಮೂಲ್ ವಿಲೀನ ಮಾಡುವಂತೆ ಅಮಿತ್ ಶಾ ಹೇಳಿಲ್ಲ, ಎರಡು ಸಂಸ್ಥೆಗಳು ಸಹಕಾರದಿಂದ ಹೋಗುವಂತೆ ತಿಳಿಸಿದ್ದಾರೆ. ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆಯಾಗಿದ್ದು, ಇದನ್ನು ವಿಲೀನ ಮಾಡಲ್ಲ ಎಂದರು.
ತಪ್ಪು ಕಲ್ಪನೆ ಊಹೆ ಟೀಕೆ ಮಾಡೋರಿಗೆ ಏನು ಹೇಳೋದು ಅಮಿತ್ ಷಾ ಮಾತನಾಡಿದ್ದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರ ಮಾಡಿಕೊಂಡು ಬೆಳೆಯಬೇಕು ಎಂದು ಹೇಳಿದ್ದಾರೆ. ತಾಂತ್ರಿಕ ಹಾಗೂ ವಿಸ್ತರಣೆ ವಿಚಾರದಲ್ಲಿ ಸಹಕಾರ ಅಗತ್ಯ, ನಂದಿನಿ ಹಾಲಿನ ಅಸ್ತಿತ್ವ ಇದ್ದೇ ಇರಲಿದೆ. ಇನ್ನೂ 100 ವರ್ಷವಾದ್ರೂ ನಂದಿನಿ ಅಳಿಯಲ್ಲ, ನಾವು ಇಲ್ಲದೆ ಇದ್ದರೂ ನಂದಿನಿ ಶಾಶ್ವತವಾಗಿ ಇರಲಿದೆ.
ಅವರ ಅಮೂಲ್ ಅವರಿಗೆ, ನಮ್ಮ ನಂದಿನಿ ನಮಗೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುವುದು, ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದರು.