ಬೆಳಗಾವಿ: ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿ, ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ ಶಾ ಸೂಚನೆ ನೀಡಿದ್ದಾರೆ.
ಬೆಳಗ್ಗೆ ಹುಬ್ಬಳ್ಳಿಯಲ್ಲಿ, ಸಂಜೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಎರಡೂವರೆ ಗಂಟೆಗಳ ಕಾಲ ಸುದೀರ್ಘವಾಗಿ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ ಶಾ,ಒಗ್ಗಟ್ಟಿನ ಮೂಲಕ ಪಕ್ಷ ಅಧಿಕಾರಕ್ಕೆ ತರಲು ಸೂಚನೆ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರಬೇಕು. ಅದಕ್ಕಾಗಿ 2023ರ ಚುನಾವಣೆಗೆ ಹೈಕಮಾಂಡ್ ‘ಮಿಷನ್ 150’ ಗುರಿ ನೀಡಿದೆ. ಈ ಗುರಿ ಮುಟ್ಟಬೇಕೆಂದರೆ ಸದ್ಯದಲ್ಲೇ ಎದುರಾಗುವ ತಾಪಂ, ಜಿಪಂ ಹಾಗೂ ಪರಿಷತ್‌ನ ಕೆಲ ಸ್ಥಾನಗಳಿಗೆ ಜೂನ್‌ನಲ್ಲಿ ನಡೆಯುವ ಚುನಾವಣೆಗಳು ಬಹಳ ಪ್ರಮುಖ. ಈ ಚುನಾವಣೆ ಗೆಲ್ಲಲು ಪಕ್ಷ ಸಂಘಟನೆಗೆ ಈಗಿನಿಂದಲೇ ಸಜ್ಜಾಗಬೇಕು. ಅದಕ್ಕಾಗಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಬೇಕು ಎಂಬ ಸೂಚನೆಯನ್ನು ಸಭೆಯಲ್ಲಿ ನೀಡಲಾಯಿತು.
ಸಭೆ ಬಳಿಕ, ಬೆಳಗಾವಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಅಮಿತ್ ಶಾ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದು ಖಚಿತ ಎಂದರು.