ಬಸವಕಲ್ಯಾಣ/ಬೀದರ್: ಜೆಡಿಎಸ್, ಕಾಂಗ್ರೆಸ್ ಇವೆರಡೂ ಪರಿವಾರದ ಪಕ್ಷವಾಗಿದ್ದು, ಇಂಥ ಪಕ್ಷಗಳಿಂದ ಕರ್ನಾಟಕದ ಕಲ್ಯಾಣ ಅಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವ್ಯಂಗ್ಯವಾಡಿದರು.
ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗೆ ಟವೆಲ್ ಹಾಕಿದ್ದಷ್ಟೇ ಅಲ್ಲ, ಕಾಂಗ್ರೆಸ್ನಲ್ಲಿ ಆ ಸ್ಥಾನಕ್ಕಾಗಿ ಇನ್ನೂ 10 ಮಂದಿ ಹಗಲುಗನಸು ಕಾಣುವುದರಲ್ಲೇ ತಲ್ಲೀನರಾಗಿದ್ದಾರೆ. ರಾಜ್ಯದಲ್ಲಿ ನಾವು ಸರ್ಕಾರ ಮಾಡುತ್ತೇವೆ ಎಂದು ಪದೇ ಪದೆ ಹೇಳುವ ಕಾಂಗ್ರೆಸ್, ಮೊದಲು ತನ್ನ ನಾಯಕ ಯಾರೆಂಬುದನ್ನು ತೀರ್ಮಾನಿಸಲಿ ಎಂದರು.
ಕಾಂಗ್ರೆಸ್ಗೆ ಜನಹಿತಕ್ಕಿಂತ ಅಧಿಕಾರ ಮುಖ್ಯ, ಆದರೆ, ಬಿಜೆಪಿಗೆ ರಾಜ್ಯದ ಬಡವರ ಕಲ್ಯಾಣದ, ಅಭಿವೃದ್ಧಿಯ ಗುರಿಯೇ ನಮ್ಮ ಸಂಕಲ್ಪವಾಗಿದೆ ಎಂದರು. ಕಾಂಗ್ರೆಸ್ ಅಧ್ಯಕ್ಷರಿಗೀಗ ಮುಖ್ಯಮಂತ್ರಿ ರೇಸ್‌ಗೆ ಬರಲಾಗಲ್ಲ, ಹೀಗಾಗಿ ಪುತ್ರನ ಮೇಲೆ ವ್ಯಾಮೋಹ ಬಂದಿದೆ. ಪುತ್ರನಿಗೆ ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವ್ಯಂಗ್ಯವಾಡಿದರು.