ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆಂಬ ವದಂತಿಗಳನ್ನು ಕೆಲವರು ವ್ಯವಸ್ಥಿತವಾಗಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಇದು ಶುದ್ಧಸುಳ್ಳು ಮತ್ತು ಅಪಪ್ರಚಾರದ ಭಾಗವಷ್ಟೇ. ಮತ್ತೊಮ್ಮೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ ಎಂದು ಅನಿತಾ ಕುಮಾರಸ್ವಾಮಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಎಲ್ಲ ಚುಣಾವಣೆಗಳಲ್ಲಿ ನಾನು ಪಕ್ಷದ ಆದೇಶವನ್ನಷ್ಟೇ ಪಾಲಿಸಿ ನಡೆದಿದ್ದೇನೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕಟ್ಟಿದ ಜೆಡಿಎಸ್‌ಗೆ ಧಕ್ಕೆ ತರುವ ಅಥವಾ ಕುಟುಂಬದ ಗೌರವಕ್ಕೆ ಚ್ಯುತಿಯನ್ನುಂಟು ಮಾಡುವ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಇದೇ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಅನಿತಾ ಕುಮಾರಸ್ವಾಮಿ ಟಿಕೆಟ್ ಕೇಳ್ತಿದ್ದಾರೆ ಎಂಬುದು ಊಹಾಪೋಹ. ಚುನಾವಣಾ ರಾಜಕೀಯದಿಂದ ಅನಿತಾ ಕುಮಾರಸ್ವಾಮಿ ಹಿಂದೆ ಸರಿದಿದ್ದಾರೆ. ಅನಿತಾ ಕುಮಾರಸ್ವಾಮಿ ಸ್ವರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.