ಉಡುಪಿ: ಕುಂದಾಪುರದ ಉದ್ಯಮಿಯೊಬ್ಬರಿಗೆ ಬಿಜೆಪಿ ಎಂಎಲ್‌ಎ ಟಿಕೆಟ್ ನೀಡುವುದಾಗಿ 5 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಬಟ್ಟೆ ಅಂಗಡಿ ಹಾಕಿಕೊಡುತ್ತೇನೆ ಎಂದು 5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಕೋಟ ನಿವಾಸಿ ಪೊಲೀಸರಿಗೆ ದೂರು ನೀಡಿದ್ದಾರೆ. ವೃತ್ತಿಯಲ್ಲಿ ಮೀನುಗಾರನಾಗಿರುವ ಬ್ರಹ್ಮಾವರ ನಿವಾಸಿ ಸುದೀನ, ಇದೀಗ ಕೋಟ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?
2015ರಲ್ಲಿ ಸುದೀನ ಅವರಿಗೆ ಪರಿಚಯವಾಗಿದ್ದ ಚೈತ್ರಾ ಕುಂದಾಪುರ, ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿದ್ದಳು. 2018-2023ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಹಂತ ಹಂತವಾಗಿ 5 ಲಕ್ಷ ರೂಪಾಯಿ ಪಡೆದಿದ್ದಾಳೆ.
ಇದನ್ನೂ ಓದಿ: ಹಳೆ ಸಂಸತ್ ಭವನದಲ್ಲಿ ಕೊನೆಯ ಕಲಾಪ ಅಂತ್ಯ; ನಾಳೆಯಿಂದ ಹೊಸ ಕಟ್ಟಡದಲ್ಲಿ ಅಧಿವೇಶನ
ಬರೋಬ್ಬರಿ 3 ಲಕ್ಷ ರೂಪಾಯಿಯನ್ನು ಚೈತ್ರಾಳ ಖಾತೆಗೆ ಯುವಕ ಸುದೀನ ವರ್ಗಾಯಿಸಿದ್ದಾನೆ. ಉಳಿದ ಎರಡು ಲಕ್ಷ ರೂ. ಹಣವನ್ನ ನಗದು ರೂಪದಲ್ಲಿ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಟ್ಟೆ ಅಂಗಡಿಗೆ ಹಣ ಪಡೆದು ನಿರ್ಮಾಣ ಕಾಮಗಾರಿ ವಿಳಂಬವಾದಾಗ ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು, ಅಂಗಡಿ ನಿರ್ಮಾಣ ವಿಳಂಬವಾಗಿರುವುದಕ್ಕೆ ಸ್ಥಳೀಯ ಮುಖಂಡರಲ್ಲಿ ಮಾತುಕತೆ ನಡೆಸಿದ್ದು, ಅಂತಿಮ ಹಂತ ತಲುಪಿದೆ ಎಂದು ನಂಬಿಸಿದ್ದಳು. ಕೊನೆಗೆ ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು ಎಂದು ಆತ ಆರೋಪಿಸಿದ್ದಾನೆ.
ಇದನ್ನೂ ಓದಿ: ʼವಿಶ್ವ ಪಾರಂಪರಿಕ ತಾಣʼಗಳ ಪಟ್ಟಿಗೆ ಹೊಯ್ಸಳರ ದೇವಾಲಯಗಳು
ಅನುಮಾನಗೊಂಡು ವಿಚಾರಿಸಲು ತೆರಳಿದಾಗ ಯುವಕನಿಗೆ ಬೆದರಿಕೆಯೂ ಹಾಕಿರುವ ಆರೋಪ ಮಾಡಲಾಗಿದೆ. ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಇದೀಗ ಈ ದೂರಿನ ಮೇರೆಗೆ ಚೈತ್ರಾ ವಿರುದ್ದ 506, 417, 420 ಐಪಿಸಿ ಸೆಕ್ಷನ್ ಅಡಿ ಎಫ್‌ಐಅರ್ ದಾಖಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.