ಹಾಸನ: ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿರುವಾಗ ಇನ್ನೊಂದು ವಾರ ನಾನು ಯಾವ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿ, ವಿಜ್ಞಾನಿಗಳ ಅವಿರತ ಶ್ರಮದಿಂದ ದೇಶದ ಪ್ರತಿಷ್ಠೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಪ್ರಧಾನಮಂತ್ರಿ ಕೂಡ ಬಂದು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಹೋಗಿದ್ದಾರೆ. ಪ್ರಸ್ತುತ ದೇಶ-ವಿದೇಶಗಳಲ್ಲಿ ಚಂದ್ರಯಾನದ ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿದ್ದು, ಪ್ರಶಂಸೆ ಮಾತುಗಳು ಕೇಳಿ ಬರುತ್ತಿದೆ. ಎಲ್ಲರ ಗಮನ ಆ ಭಾಗದಲ್ಲಿರುವಾಗ ಈಗ ರಾಜ್ಯದ ರಾಜಕಾರಣ ಬಗ್ಗೆ ಹೆಚ್ಚಿಗೆ ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಉತ್ತರಿಸಿದರು.
ಇದನ್ನೂ ಓದಿ: ʼಚಂದ್ರಯಾನ-3ʼ ಯಶಸ್ವಿಗೆ ರಾಷ್ಟ್ರ ನಾಯಕರ ಅಭಿನಂದನೆ
ನೀವು ಸರ್ಕಾರದ ಬಗ್ಗೆ ಕಠಿಣವಾಗಿ ಮಾತನಾಡುವುದು ಬೇಡ. ಇವರು ತಪ್ಪುಗಳನ್ನು ಮಾಡಿಕೊಂಡು ಹೋಗಲಿ ಬಿಟ್ಟು ಬಿಡಿ ಎಂದು ಬಹಳಷ್ಟು ಜನ ನನಗೆ ಹೇಳುತ್ತಿದ್ದಾರೆ. ಹಾಗಂತ ಬಿಟ್ಟು ಬಿಟ್ಟರೆ ಇವರಿಗೆ ಹೇಳೋರು ಕೇಳೋರು ಇರುವುದಿಲ್ಲ, ಆ ಪರಿಸ್ಥಿತಿಗೆ ಸರ್ಕಾರ ಹಾಗೂ ಮಂತ್ರಿಗಳು ಬಂದು ಬಿಡ್ತಾರೆ. ಈಗಲೇ ಹೇಳೋರು, ಕೇಳೋರು ಇಲ್ಲಾ. ನಾನು ಸರ್ಕಾರಕ್ಕೆ ಹೇಳುವುದು, ನಿಮ್ಮ ಗ್ಯಾರಂಟಿ ಸ್ಕೀಂಗಳು ಮಾಡಿ ಸಂತೋಷ. ಅದು ಎಷ್ಟರ ಮಟ್ಟಿಗೆ ನಿಮ್ಮ ಗ್ಯಾರಂಟಿ ಸ್ಕೀಂಗಳಿಂದ ಇಡೀ ನಾಡಿನ ಜನತೆಗೆ ಅನೂಕೂಲ ಆಗುತ್ತಿದೆ ಬಗ್ಗೆ ಅವಲೋಕಿಸಿ ಎಂದರು.
ಗೃಹಜ್ಯೋತಿ ಹೆಸರಿನಲ್ಲಿ ಜನರಿಗೆ ಟೋಪಿ ಹಾಕೋದನ್ನು ಪ್ರತಿನಿತ್ಯ ಕಾಣುತ್ತಿದ್ದೇನೆ. ಈಗಾಗಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಮಂತ್ರಿಗಳು ಲೋಡ್ ಶೆಡ್ಡಿಂಗ್ ಅವಶ್ಯಕತೆ ಇಲ್ಲಾ ಅಂತಾರೆ. ಯಾವ ಸಮಯದಲ್ಲಿ ವಿದ್ಯುತ್ ಕೊಡ್ತಾರೆ ಅಂತಾ ಹಳ್ಳಿಜನ ಕಾಯುತ್ತಾ ಕೂರಬೇಕಾದ ಪರಿಸ್ಥಿತಿಗೆ ಬಂದಿದೆ. ಇವತ್ತು ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಆರಂಭ ಮಾಡಿದ್ದಾರೆ. ಯಾವುದೇ ರೀತಿಯ ಸಿದ್ಧತೆಗಳಿಲ್ಲ, ಮುಂದಿನ ಆಗುವ ಸಮಸ್ಯೆಗಳ ಬಗ್ಗೆ ಚಿಂತನೆ ಇಲ್ಲ.
ರೈತರ ಪರಿಸ್ಥಿತಿ ಬಗ್ಗೆ ಚಿಂತಿಸಲಿ
ಮೊದಲು ರೈತರ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಸರ್ಕಾರ ಯೋಚನೆ ಮಾಡಲಿ. ರಾಜ್ಯದಲ್ಲಿ 130 ತಾಲ್ಲೂಕುಗಳಲ್ಲಿ ಬರದ ಛಾಯೆ ಮೂಡಿದೆ ಅಂತ ಮಂತ್ರಿಗಳೇ ಹೇಳಿದ್ದಾರೆ. ಬಿತ್ತನೆ ಎಲ್ಲಾ ಸಂಪೂರ್ಣ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ಯಾರಂಟಿ ಕಡೆ ವಿಜೃಂಭಿಸುವುದುನ್ನು ಬಿಟ್ಟು ಮೊದಲು ರೈತರ ಬದುಕು ಏನಾಗಿದೆ ಎಂಬುದನ್ನು ಸರ್ಕಾರ ಕಣ್ಣುತೆರೆದು ನೋಡಲಿ ಎಂದು ಸಲಹೆ ನೀಡಿದರು.
ಕಾವೇರಿ ವಿಷಯ ಕುರಿತು ಈಗಾಗಲೇ ಸರ್ವಪಕ್ಷದ ಸಭೆಯಲ್ಲೂ ಚರ್ಚೆ ಮಾಡಿದ್ದೇನೆ. ವಾಟರ್ ಮ್ಯಾನೇಜ್ಮೆಂಟ್ ಬೋರ್ಡ್‌ನವರು ನೀರು ಬಿಡಿ ಎಂದಾಗ ಸರ್ವ ಪಕ್ಷದ ಸಭೆ ಕರೆದು ಚರ್ಚೆ ಮಾಡಬೇಕಿತ್ತು. ಸುಪ್ರೀಂಕೋರ್ಟ್‌ಗೆ ತಮಿಳುನಾಡಿನವರು ಅರ್ಜಿ ಹಾಕಿಕೊಂಡಾಗ ತೀರ್ಪು ಬರುವವರೆಗೂ ಕಾಯಬೇಕಿತ್ತು. ಏಕಾಏಕಿ ನೀರು ಬಿಟ್ಟುಬಿಟ್ಟರು, ರೈತರು ಪ್ರತಿಭಟನೆ ಮಾಡಲು ಹೋದಾಗ ನೀವು ಕೋರ್ಟ್‌ಗೆ ಕೇಸ್ ಹಾಕಿಕೊಳ್ಳಿ ಎಂದರು. ಈ ಮಟ್ಟಕ್ಕೆ ಮಾತನಾಡುವುದನ್ನು ನಿಲ್ಲಿಸಿ ಎಂದು ನೇರವಾಗಿಯೇ ಹೇಳಿದ್ದೇನೆ ಎಂದರು. ಹಲವಾರು ವರ್ಷದಿಂದ ಇರುವ ಮಾನದಂಡವನ್ನು ಪರಿಷ್ಕರಿಸಿ ಎಂದು ಪತ್ರ ಬರೆದಿದ್ದಾರೆ. ಪತ್ರಕ್ಕೆ ಉತ್ತರ ಬರುವವರೆಗೂ ಕಾಯುತ್ತಾ ಕೂರುತ್ತೀರೋ, ರೈತರನ್ನು ಉಳಿಸುತ್ತೀರೋ, ರೈತರು ಸಂಕಷ್ಟಕ್ಕೆ ಮೊದಲು ಗಮನ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ವಿವರಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಇಪ್ಪತ್ತು ಸೀಟ್ ಗೆಲ್ಲಬೇಕಾದರೆ ಎಲ್ಲರನ್ನೂ ತುಂಬಿಕೊಳ್ಳಬೇಕು. ಬಸ್‌ನ ಸಂಪೂರ್ಣ ಓವರ್ ಲೋಡ್ ಮಾಡ್ಕೊಂಡು ಮುಂದಿನ ಸ್ಟೇಷನ್‌ನಲ್ಲಿ ಇಳಿಯದಂತೆ ಬಿಗಿ ಮಾಡಿಕೊಳ್ಳಬೇಕು ಅಂತ ದಿನ ಹೇಳುತ್ತಿದ್ದಾರೆ. ಏನೇನಾಗುತ್ತೆ ನೋಡೋಣ , ಜನ ಏನು ತೀರ್ಮಾನ ಮಾಡ್ತಾರೆ ಗೊತ್ತಿಲ್ಲ, ಚಂದ್ರಯಾನದ ಬಗ್ಗೆ ಕಾಂಗ್ರೆಸ್-ಬಿಜೆಪಿಯವರ ನಡುವೆ ಪೈಪೋಟಿ ಶುರುವಾಗಿದೆ.ಇದಕ್ಕೆ ದೊಡ್ಡಮಟ್ಟದ ಕೊಡುಗೆ ಕಾಂಗ್ರೆಸ್‌ದು ಅಂತಾರೆ. ಇನ್ನೊಂದು ಕಡೆ ಬಿಜೆಪಿಯವರು ನಮ್ಮದು ಅಂತಾರೆ. ಎರಡು ದಿವಸದಿಂದ ನಡೆಯುತ್ತಿದೆಯೆಲ್ಲಾ ಇದು ರಾಜಕೀಯ ಎಂದು ಟೀಕೆ ಮಾಡಿದರು.
ಚಂದ್ರಯಾನ ವಿಷಯದಲ್ಲಿ ಇವರಿಗಿಂತ ಮುಂದೆ ಕರ್ನಾಟಕ ಸರ್ಕಾರದ ದೊಡ್ಡ ಜಾಹೀರಾತು ಬಂತು. ಈಗ ಪೈಪೋಟಿ ಮೇಲೆ ಕೇಂದ್ರ ಸರ್ಕಾರದಿಂದಲೂ ಕೊಡ್ತಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ ದೇಶಕ್ಕೆ ಬಂದಂತಹ ವಿಜ್ಞಾನಿಗಳ ಪರಿಶ್ರಮದ ದಾಖಲೆ ಎನ್ನುವುದೇನಿದೆ ಅದಕ್ಕೂ ಮೆರಿಟ್ ತೆಗೆದುಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ. ನೀವು ಬೇಕಾದರೇ ಪೈಪೋಟಿ ಮಾಡಿಕೊಳ್ಳಿ. ಆದರೆ ಜನಗಳ ಸಮಸ್ಯೆ ಇದೆಯಲ್ಲಾ, ಅದಕ್ಕೆ ಯಾವ ರೀತಿ ಪರಿಹಾರ ಕೊಡಬೇಕು ಎನ್ನುವುದರ ಕಡೆ ಗಮನಕೊಡಿ ಎಂದು ಕುಟುಕಿದರು.
ಲೋಕಸಭೆ ಚುನಾವಣೆಗೆ ಜೆಡಿಎಸ್ ನಿಂದ ನಾವು 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ, 28 ರಲ್ಲಿ ನಾವು ಗೆದ್ದು ಬಿಡ್ತಿವಿ ಅಂತ ಹೇಳಲ್ಲ, ನಾವೊಂದು ನಾಲ್ಕೈದು ಸ್ಥಾನ ಗೆಲ್ಕುವ ಅವಕಾಶವಿದೆ. ಮುಂದಿನ ದಿನಗಳಲ್ಲೂ ನಮ್ಮ ಪಕ್ಷದ ಕಾರ್ಯಕರ್ತರನ್ನು ನಾನು ಉಳಿಸಬೇಕು, ಕಾರ್ಯಕರ್ತರನ್ನು ಉಳಿಸಿಕೊಳ್ಳಲು, ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ನಾವು ನಮ್ಮ ಪಕ್ಷದ ಕಾರ್ಯಕರ್ತರ ದುಡಿಮೆಗೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾಗಬಾರದು. ಪಕ್ಷದ ಸಂಘಟನೆಗೆ ಕೋರ್ ಕಮಿಟಿ ಮಾಡಿದ್ದೇವೆ. ಸದ್ಯದಲ್ಲೇ ವಿಷಯಾಧಾರಿತವಾಗಿ ರಾಜ್ಯದ ಪ್ರವಾಸ ಮಾಡುವುದಾಗಿ ಹೇಳಿದರು.
ನಾವಂತೂ ಯಾರ ಹತ್ರನೂ ಚರ್ಚೆಗೆ ಹೋಗಿಲ್ಲ. ಇದು ಹೊರಗಡೆ ಮಾಧ್ಯಮಗಳಲ್ಲಿ ಬರುತ್ತಿದೆ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅಂತಾ ಚರ್ಚೆ ನಡೀತಿದೆ. ಸಿವೋಟರ್, ಸರ್ವೆ ರಿಪೋರ್ಟ್‌ಗಳು ಆಗಲೇ ಬರ್ತಾ ಇದೆ. ಬಿಜೆಪಿಯವರು 23-25 ಗೆಲ್ತಾರೆ, ಕಾಂಗ್ರೆಸ್ 5 ಗೆಲ್ಲುತ್ತೆ ಅಂತ ಹೇಳುತ್ತಿದ್ದೀರಿ. ಈಗ ನಮ್ಮ ಹೊಂದಾಣಿಕೆ ಅವಶ್ಯಕತೆ ಏನಿದೆ ಅವರಿಗೆ ಅವರೇ ಸ್ವತಂತ್ರವಾಗಿ 24-25 ಸೀಟ್ ಗೆಲ್ಲುವುದಾದರೆ ಬಿಜೆಪಿಗೆ ನಮ್ಮ ಅವಶ್ಯಕತೆ ಇಲ್ಲ, ಕಾಂಗ್ರೆಸ್ ಬಿಡಿ ಅವರಿಗೆ ನಮ್ಮ ಅವಶ್ಯಕತೆ ಇಲ್ಲ, ಅವರು ಇಪ್ಪತ್ತು ಗೆಲ್ತಿವಿ ಅಂತಾ ಹೇಳುತ್ತಾರೆ ಅದರಿಂದ ಹೊಂದಾಣಿಕೆ ಪ್ರಶ್ನೆ ನಮ್ಮ ಮುಂದೆ ಇಲ್ಲ, ಅವರು ಇಬ್ಬರು ಬೆಳೆದಿದ್ದಾರೆ. ದುಡ್ಡಿನಲ್ಲಿ ಶಕ್ತಿ ಇದೆ, ನಾವು ಕಾರ್ಯಕರ್ತರ ಪಡೆಯೊಂದಿಗೆ ಯಾವ ರೀತಿ ಹೋಗಬೇಕು, ಸಂಘಟನೆ ಮಾಡಬೇಕು ಮಾಡ್ತೇವೆ ಎಂದು ಖಾರವಾಗಿ ನುಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.