ಹಾಸನ: ಏಪ್ರಿಲ್ 23ರ ವರೆಗೆ ನಿಮ್ಮ ಋಣ ಇದೆ. ಅಲ್ಲಿಯವರೆಗೂ ನಾನು ರಾಜೀನಾಮೆ ಕೊಡಲ್ಲ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನಿಮ್ಮ ಪಾಡಿಗೆ ನೀವು ಇರಿ, ನಮ್ಮ ಪಾಡಿಗೆ ನಾವು ಇರುತ್ತೇವೆ. ನಿಮ್ಮದು ನಾನು ಹೇಳಲು ಹೋದರೆ ನೀವು ಇನ್ನೊಂದು ಹೇಳುತ್ತೀರಿ. ಏನು, ಏನಾಯ್ತು ನಾನು ಹೇಳುತ್ತೇನೆ. ನಾನೇನು ಯಾರಿಗೂ ಮೋಸ ಮಾಡಿಲ್ಲ, ಪಕ್ಷ ದ್ರೋಹ ಮಾಡಿಲ್ಲ, ಯಾರಿಗೂ ಕೆಟ್ಟ ಹೆಸರು ತಂದಿಲ್ಲ. ಈ ದೇಶದ ಪ್ರಜಾಪ್ರಭುತ್ವದಲ್ಲಿ ಎಂತೆಂತಹವರು ಪಾರ್ಟಿ ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.
ಎ.ಟಿ.ರಾಮಸ್ವಾಮಿ, ಶ್ರೀನಿವಾಸ್‌ಗೌಡ, ಗುಬ್ಬಿ ವಾಸಣ್ಣ ಯಾರ್ಯಾರೋ ಯಾವ್ಯಾವ ಪಾರ್ಟಿ ಬಿಟ್ಟು ಹೋಗುತ್ತಿದ್ದಾರೆ. ಅವತ್ತು ಹದಿನೇಳು ಜನರ ಜೊತೆ ಹೋಗುವದಾದರೆ ಅವತ್ತೇ ನನಗೆ ಮಂತ್ರಿ ಕೊಡೋರು. ನಾನು ಅಂತಹ ಕೆಟ್ಟ ಕೆಲಸ ಮಾಡಿಲ್ಲ ಎಂದರು.
ನಾನು ರಾಜಕೀಯ ಸನ್ಯಾಸಿ ಅಲ್ಲ, ನಾನು ರಾಜಕೀಯ ಮಾಡಲೇಬೇಕು. ಹಾಗಾಗಿ ನಾನು ಮಾಡುತ್ತೇನೆ. ಅದರ ಸಲುವಾಗಿ ಈ ಭಿನ್ನಾಭಿಪ್ರಾಯ ಬೇಡ. ರಣರಂಗದಲ್ಲಿ ಸೋಲಿಸಿ ನಾನೇನು ಬೇಡ ಅನ್ನಲ್ಲ. ಈ ಕ್ಷೇತ್ರದ ಜನ ನನ್ನ ಕೈ ಹಿಡಿದರೆ ನಾನು ಮುಂದುವರಿಯುತ್ತೇನೆ. ಈ ಕ್ಷೇತ್ರದ ಜನ ಒಪ್ಪದಿದ್ರೆ ಮನೆಗೆ ಹೋಗುತ್ತೇನೆ ಎಂದು ಹೇಳಿದರು.
ಅಂದಹಾಗೆ ಜೆಡಿಎಸ್ ನಿಂದ ದೂರ ಇದ್ದ ಶಿವಲಿಂಗೇಗೌಡ ದಳಪತಿಗಳ ವಿರುದ್ಧ ಇದ್ದ ಸಿಟ್ಟನ್ನು ಒಮ್ಮೆಲೇ ಮಾಧ್ಯಮದವರ ಮುಂದೆ ಹೊರಹಾಕಿದ್ದಾರೆ.