ಬೆಂಗಳೂರು: ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಗೆ ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಏನೂ ನಷ್ಟ ಆಗಲ್ಲ. ಆದ್ರೆ ಹೋಗುವವರು ದುಡುಕಿನ ನಿರ್ಧಾರ ತೆಗೆದುಕೊಂಡು ಹೋಗಿದ್ದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ.
ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಲು ನಿರ್ಧರಿಸಿ ಬಹಳ ದೊಡ್ಡ ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೋದ ಮೇಲೆ ಲಕ್ಷ್ಮಣ ಸವದಿ ಪಶ್ಚಾತ್ತಾಪ ಪಡುತ್ತಾರೆ ಎಂದರು. ಈ ಬಾರಿ ಚುನಾವಣೆಯಲ್ಲಿ ಹೊಸ ಜನರೇಷನ್ಗೆ ಅವಕಾಶ ಕೊಟ್ಟಿದ್ದೇವೆ. ಬಿಜೆಪಿಯನ್ನು ಹೊಸ ತಲೆಮಾರಿನ ಪಾರ್ಟಿಯನ್ನಾಗಿ ಮಾಡುತ್ತಿದ್ದೇವೆ. ಹೀಗಾಗಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ.
ಎಂಎಲ್ಸಿ ಲಕ್ಷ್ಮಣ ಸವದಿಯವರು ವರ್ಷವಾದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಖ ನೋಡುತ್ತಾರೋ ಇಲ್ವೋ ಗೊತ್ತಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ನಿರ್ಧಾರ ಸ್ವಾರ್ಥದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಲಕ್ಷ್ಮಣ ಸವದಿ ಕಾಂಗ್ರೆಸ್ಗೆ ಹೋಗ್ತಿರೋದು ದುಃಖ ತರಿಸಿದೆ. ಲಕ್ಷ್ಮಣ ಸವದಿ ಜೊತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಶೀಘ್ರದಲ್ಲೇ ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದರು.