ಬೆಂಗಳೂರು: ಸಿದ್ದರಾಮಯ್ಯರನ್ನು ಮುಂದಿನ ಚುನಾವಣೆಯಲ್ಲಿ ಜನತೆ ಗೆಲ್ಲಿಸುವುದಿಲ್ಲ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೀಳು ಮಟ್ಟದ ಹೇಳಿಕೆ ಕೊಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳ ಬಗ್ಗೆ ಸಿದ್ದರಾಮಯ್ಯ ಲೂಸ್ ಕಾಮೆಂಟ್ ಮಾಡಿದ್ದಾರೆ. ಬೊಮ್ಮಾಯಿ ಬಗ್ಗೆ ಆ ರೀತಿ ಹೇಳುವ ಮೂಲಕ ರಾಜ್ಯಕ್ಕೂ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.ಮಾಜಿ ಮುಖ್ಯಮಂತ್ರಿಯಾದವರು, ಹಾಲಿ ಮುಖ್ಯಮಂತ್ರಿ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿಜೆಪಿ ಗ್ರಾಫ್ ಹೆಚ್ಚುತ್ತಿದೆ. ಎಲ್ಲ ರೀತಿಯ ವಿಕಾಸದಿಂದ ಬಿಜೆಪಿ ಉತ್ತಮ ಕೆಲಸ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನ ನಮ್ಮ ಸರ್ಕಾರ ಹೆಚ್ಚಿಸಿದೆ. ನಮ್ಮ ಪಕ್ಷದ ಎಲ್ಲ ನಾಯಕರು ರಾಜ್ಯಕ್ಕೆ ಬಂದು ಬಿಜೆಪಿ ಗೆಲ್ಲಿಸುವ ಕೆಲಸ ಮಾಡಲಿದ್ದಾರೆ ಎಂದರು.
ಜೊತೆಗೆ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಇದು ಮುಖ್ಯಮಂತ್ರಿಗಳ ಪರಮಾಧಿಕಾರ. ಇಷ್ಟೊತ್ತಿಗೆ ಸಚಿವ ಸಂಪುಟ ವಿಸ್ತರಣೆಯಾಗಬೇಕಿತ್ತು. ಆದರೆ ಇನ್ನೂ ಆಗಿಲ್ಲ. ಯಾಕೆ ಆಗಿಲ್ಲ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಖಚಿತವಾಗಿ ಮುಂದೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಿದರು.