ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಸಂಬಂಧ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕರೆದಿದ್ದ ಸಭೆ ಬಗ್ಗೆ ಚರ್ಚೆ ಶುರುವಾಗಿದ್ದು, ಅವರು ಕಾಂಗ್ರೆಸ್ ಸೇರುವುದು ಖಚಿತ ಎಂಬ ಮಾತುಗಳಿಗೆ ಪುಷ್ಠಿ ಸಿಕ್ಕಂತಾಗಿದ್ದು, ಈ ಬಗ್ಗೆ ಖುದ್ದು ಕ್ಷೇತ್ರದ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ‘ಜವಾಬ್ದಾರಿಯುತ ಶಾಸಕನಾಗಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಲೇಬೇಕು; ಯಾರೇನೇ ಕಾಮೆಂಟ್ಸ್ ಮಾಡಿದರೂ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದು ಹೇಳಿದರು.
ಈ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ‘ನನಗೆ ಅಧಿಕಾರಿಗಳು ವಾರದ ಹಿಂದೆ ಗೃಹಲಕ್ಷ್ಮಿ ಯೋಜನೆಯ ಸಮಾರಂಭಕ್ಕೆ ಬರಬೇಕು ಎಂದು ಆಹ್ವಾನಿಸಿದ್ದರು. ನಾನು ಅವರಿಂದ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡೆ. ನಮ್ಮ ಕ್ಷೇತ್ರದ 62 ಸಾವಿರ ಬಿಪಿಎಲ್ ಕುಟುಂಬಗಳಿಗೆ ಯೋಜನೆಯ ಲಾಭ ಕೊಡಿಸಲು ಈ ಸಭೆ ಮಾಡ್ತಿದ್ದೇವೆ. ಇದರ ಜತೆ ‘ಗೃಹಜ್ಯೋತಿ’ ಯೋಜನೆಯಲ್ಲಿ ನಮ್ಮ ಕ್ಷೇತ್ರದಲ್ಲಿ 1.97 ಲಕ್ಷ ಫಲಾನುಭವಿಗಳಿದ್ದಾರೆ. ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರನ್ನೂ ಕರೆದು ಮಾಹಿತಿ ಕೊಟ್ಟಿದ್ದೇನೆ. ಯಾವುದೇ ಕಾರಣಕ್ಕೂ ಸರ್ಕಾರದ ಫಲ ಜನಸಾಮಾನ್ಯರಿಗೆ ಸಿಗದಂತಾಗಬಾರದು; ಈ ಕಾರಣಕ್ಕೆ ಸಭೆ ನಡೆಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.
ನಿಮ್ಮ ಈ ಸಭೆಯಿಂದ ಬಿಜೆಪಿಗೆ ಮುಜುಗರ ಆಗಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನೊಬ್ಬ ಜವಾಬ್ದಾರಿಯುತ ಶಾಸಕನಾಗಿ ಸರ್ಕಾರದ ಯೋಜನೆ ಅರ್ಹರಿಗೆ ತಲುಪಿಸುವ ಕೆಲಸ ಮಾಡ್ತಿದ್ದೇನೆ ವಿನ: ಇದರಲ್ಲಿ ಬೇರೇನೂ ವಿಶೇಷ ಇಲ್ಲ. ನನಗೆ ಸಾರ್ವಜನಿಕರು ಸರ್ಕಾರದ ಯೋಜನೆ ಯಾಕೆ ಕೊಡ್ತಿಲ್ಲ ಅಂತ ಕೇಳಬಹುದು. ಆಗ ನಾನು ಬಿಜೆಪಿ ಶಾಸಕ ಅಂತ ಹೇಳಕ್ಕಾಗಲ್ಲ. ಜವಾಬ್ದಾರಿಯುತ ಶಾಸಕನಾಗಿ ನಾನು ಸರ್ಕಾರದ ಯೋಜನೆ ಜನರಿಗೆ ತಲುಪಿಸಲೇಬೇಕು. ಯಾರೇನೇ ಕಾಮೆಂಟ್ಸ್ ಮಾಡಿದರೂ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದು ಹೇಳಿದರು.
ಇದನ್ನೂ ಓದಿ; ಕಾರಣ ನೀಡದೆ ಪ್ರತಿಭಟನೆ ಮುಂದೂಡಿದ ಬಿಜೆಪಿ; ರಾಜ್ಯ ನಾಯಕರಿಗೆ ಕಾಡ್ತಿದ್ಯಾ ನಾಯಕತ್ವದ ಕೊರತೆ?
‘ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ; ಕಾಂಗ್ರೆಸ್ ನಾಯಕರ ಜತೆಗೂ ಇದರ ಬಗ್ಗೆ ಮಾತಾಡಿಲ್ಲ. ಕಾಂಗ್ರೆಸ್ ಗೆ ನನ್ನ ಬೆಂಬಲಿಗರು ಮಾತ್ರವಲ್ಲ, ಎಲ್ಲ ಕ್ಷೇತ್ರಗಳಿಂದಲೂ ಹೋಗಿದ್ದಾರೆ. ಯಾರು ಜಿ.ಪಂ, ತಾ.ಪಂ, ಬಿಬಿಎಂಪಿಗೆ ಸ್ಪರ್ಧೆ ಮಾಡ್ಬೇಕು ಅನ್ಕೊಂಡಿದ್ರೋ ಅವರು ಕಾಂಗ್ರೆಸ್ ಗೆ ಹೋಗಿದ್ದಾರೆ. ಯಾರು ಶಾಸಕರ ಜತೆ ಇರ್ಬೇಕು ಅನ್ಕೊಂಡಿದಾರೋ ಅವರು ನನ್ನ ಜತೆಯೇ ಇದ್ದಾರೆ. ನನ್ನ ಜತೆ ಒಂದು ಸಾವಿರ ಮುಖಂಡರು ಉಳ್ಕೊಂಡಿದ್ದಾರೆ’ ಎಂದರು.
ಕುಮಾರಸ್ವಾಮಿ ಆರೋಪಗಳಿಗೆ ಉತ್ತರ ಕೊಡಲ್ಲ
‘ನಾನು ಕುಮಾರಸ್ವಾಮಿ ಅವರ ಯಾವುದೇ ಆರೋಪಗಳಿಗೆ ಉತ್ತರ ಕೊಡಲ್ಲ. ಅವರು ಪ್ರಧಾನಿಯಾಗಿದ್ದವರ ಮಗ; ನಾನು ಸಾಮಾನ್ಯ ಅಧಿಕಾರಿಯ ಮಗ; ಈಗ ಈ ಮಟ್ಟಕ್ಕೆ ಬಂದಿರುವೆ. ಕ್ಷೇತ್ರದ ಕುಡಿಯುವ ನೀರಿನ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ. ಯಡಿಯೂರಪ್ಪ ಅವರನ್ನ ಭೇಟಿ ಮಾಡ್ತೀನಿ’ ಎಂದು ಸೋಮಶೇಖರ್ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.