ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಪಕ್ಷಾಂತರ ಆಗೋದು ಮಾಮೂಲಿಯಾಗಿದೆ, ಈಗಾಗಲೇ ಬಿಜೆಪಿ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇದರ ಬೆನ್ನಲ್ಲೇ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಘೋಷಿಸಿದ್ದಾರೆ. ನೈಋತ್ಯ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಪ್ರವೇಶಿಸಿದ್ದರು.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಹಿನ್ನೆಲೆ ರಾಜೀನಾಮೆ ನೀಡುತ್ತಿದ್ದಾರೆ. ಸದ್ಯದಲ್ಲಿಯೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲೇಬೇಕು ಎಂಬ ಇಚ್ಛೆ ಹೊಂದಿದ್ದೇನೆ. ಈಗಾಗಲೇ ನನ್ನ ನಿಲುವು, ಭಾವನೆ ಪ್ರಕಟ ಮಾಡಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಸಲ್ಲಿಸಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿಯಿಂದ ಟಿಕೆಟ್ ಸಿಗುವ ಲಕ್ಷಣ ಕಂಡುಬಂದಿಲ್ಲ. ಅವರವರ ಮಕ್ಕಳ ಹೆಸರು ಓಡಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ 3 ಪಕ್ಷಗಳ ನಾಯಕರು ಒಂದೊಂದು ಕಾರಣ ಹೇಳಿ ಪಕ್ಷಾಂತರ ಆಗುತ್ತಿದ್ದಾರೆ, ಜೆಡಿಎಸ್‌ನ ಎಟಿ ರಾಮಸ್ವಾಮಿ, ಶಿವಲಿಂಗೇಗೌಡ ,ಮೊನ್ನೆಯಷ್ಟೇ ಕಾಂಗ್ರೆಸ್ ಸೇರಿದ್ದರು. ಬಿಜೆಪಿಯ ಬಾಬುರಾವ್ ಚಿಂಚನಸೂರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು.