ಅಯೋಧ್ಯೆ : ಶ್ರೀರಾಮ ಮಂದಿರದ ಕಾಮಗಾರಿ ಈಗಾಗಲೇ ಶೇಕಡ 50ರಷ್ಟು ಪೂರ್ಣಗೊಂಡಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಮುಕ್ತಾಯದ ಹಂತಕ್ಕೆ ತಲುಪುತ್ತದೆ ಎಂದು ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರ 2024ರ ಜನವರಿ ವೇಳೆಗೆ ಭಕ್ತರ ಪ್ರವೇಶಕ್ಕೆ ಅವಕಾಶ ಸಿಗಲಿದೆ , ರಾಮಮಂದಿರ ನಿರ್ಮಾಣ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿದ್ದು, 2024ರ ಜನವರಿಯಿಂದ ಭಕ್ತರಿಗೆ ಪ್ರವೇಶ ಸಿಗಲಿದೆ. ಆ ವೇಳೆಗೆ ಅಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯೂ ಸಂಪನ್ನಗೊಳ್ಳಲಿದೆ. ಪೂಜೆಯನ್ನೂ ಸಲ್ಲಿಸಬಹುದು ಎಂದು ಹೇಳಲಾಗಿದೆ.
ಇನ್ನು ಶ್ರೀರಾಮಂದಿರ ಉದ್ಘಾಟನಾ ಸಮಾರಂಭದ ಆಚರಣೆ ಕಾರ್ಯಕ್ರಮಗಳು 2022ರ ಡಿಸೆಂಬರ್ನಿಂದ 2024ರ ಜನವರಿಯವರೆಗೂ ನಡೆಯಲಿದೆ ಎಂದು ತಿಳಿಸಿದ್ದಾರೆ.ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2020ರ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸಿದ್ದರು.
2024ರ ಮಕರ ಸಂಕ್ರಾಂತಿ ಸಂದರ್ಭದಲ್ಲಿ ದೇಗುಲದ ಗರ್ಭಗುಡಿಯಲ್ಲಿ ರಾಮಲಲ್ಲನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಬಳಿಕ ಅದೇ ತಿಂಗಳಿನಲ್ಲಿ ಭಕ್ತರಿಗೆ ದರ್ಶನಕ್ಕಾಗಿ ದೇಗುಲವನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.