ಲಕ್ನೋ: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಹೇಳಿಕೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಹೇಳಿಕೆ ಸಂಬಂಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನಡುವೆ ಅಯೋಧ್ಯೆಯ ಸಂತರೊಬ್ಬರು ಉದಯ್‌ನಿಧಿ ತಲೆ ಕಡಿದರೆ 10 ಕೋಟಿ ಬಹುಮಾನ ನೀಡುವುದಾಗಿ ವಿವಾದ ಎಬ್ಬಿಸಿದ್ದಾರೆ.
ಅಯೋಧ್ಯೆ ಸಂತ ಚಾವ್ನಿಯ ಮಹಂತ್ ಪರಮಹಂಸ ದಾಸ್ ಅವರು ತಮಿಳುನಾಡು ಸಚಿವರ ಶಿರಚ್ಛೇದ ಮಾಡುವವರಿಗೆ 10 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದು, ಸಾಂಕೇತಿಕವಾಗಿ ಉದಯ್‌ನಿಧಿ ಸ್ಟಾಲಿನ್ ಅವರ ಶಿರಚ್ಛೇದ ಮಾಡಿ ಆಕ್ರೋಶ ಹೊರಹಾಕಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ದೇಶದ ಅತೀ ಶ್ರೀಮಂತ ರಾಜಕೀಯ ಪಕ್ಷ ಯಾವುದು ಗೊತ್ತಾ?
ಸನಾತನ ಧರ್ಮಕ್ಕೆ ಅಂತ್ಯವಿಲ್ಲ, ಭೂಮಿ ಇರುವವರೆಗೂ ಸನಾತನ ಧರ್ಮ ಸ್ಥಿರವಾಗಿರಲಿದೆ. ಕಳೆದ 2 ಸಾವಿರ ವರ್ಷದಲ್ಲಿ ಸಾವಿರ ಧರ್ಮಗಳು ಭೂಮಿ ಮೇಲೆ ಬಂದು ಮರೆಯಾಗಿವೆ. ಆದರೆ ನಾಶವಾಗದೆ ಉಳಿದ ಒಂದೇ ಒಂದು ಧರ್ಮವೆಂದರೆ ಅದು ‘ಸನಾತನ ಧರ್ಮ’ ಎಂದಿದ್ದಾರೆ.
ಯಾರೂ ಅವನ ತಲೆಯನ್ನು ತರದಿದ್ದರೆ, ನಾನು ಅವನ ತಲೆಯನ್ನು ನನ್ನ ಕೈಯಿಂದಲೇ ಕತ್ತರಿಸುತ್ತೇನೆ, ಡಿಎಂಕೆ ನಾಯಕನ ಶಿರಚ್ಛೇದ ಮಾಡಲು ಕತ್ತಿಯನ್ನು ಸಹ ನಾನು ಸಿದ್ಧಪಡಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ‘ತಪ್ಪುಗಳ ಮರೆಮಾಚಲು ಬಿಜೆಪಿ ಧರ್ಮವನ್ನು ಅಸ್ತ್ರವಾಗಿ ಬಳಸುತ್ತಿದೆ’
‘ಸನಾತನ ನಿರ್ಮೂಲನೆ’ ವಿಷಯದ ಕುರಿತು ತಮಿಳುನಾಡು ಪ್ರಗತಿಪರ ಲೇಖಕರ ಕಲಾವಿದರ ಸಂಘವು ಚೆನ್ನೈನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಉದಯನಿಧಿ ಸ್ಟಾಲಿನ್ ಮಾತನಾಡುವಾಗ ‘ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಅದನ್ನು ರದ್ದುಗೊಳಿಸಲೇಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು’ ಎಂದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.