ಬೆಂಗಳೂರು: ಬಾಬುರಾವ್ ಚಿಂಚನಸೂರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ನಂತರ ಮಾತನಾಡಿ, ನಾನು ಅವಕಾಶವಾದಿ ರಾಜಕಾರಣಿ ಅಲ್ಲ. 2023ರಲ್ಲಿ ಚಿಂಚನಸೂರ್ ಸಾಮರ್ಥ್ಯ ಏನು ಅಂತಾ ಗೊತ್ತಾಗುತ್ತದೆ. ಇಂದಿಗೆ ಬಿಜೆಪಿ ಮುಗಿದ ಅಧ್ಯಾಯ. ನಾನು ಡಿ.ಕೆ.ಶಿವಕುಮಾರ್ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ನಾನು ಡಿ.ಕೆ.ಶಿವಕುಮಾರ್ ಋಣ ತೀರಿಸಬೇಕಿದೆ. ಟಿಕೆಟ್ ನೀಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.
ಚಿಂಚನಸೂರ್ 2019 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಡಿಕೆಶಿ ಮಾತನಾಡಿ, ದೇವರು ವರ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ನೀಡುತ್ತಾನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಅನುಕೂಲವಾಗಲಿದೆ. ಹೀಗಾಗಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ಗೆ ಬರುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆಯಿಟ್ಟು ಮಾಜಿ ಸಚಿವರು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಚಿಂಚನಸೂರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರ ರಾಜಕೀಯ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದೆ ಎಂದು ಸೋಶಿಯಲ್ ಮೀಡಿಯಾ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.