ಬಳ್ಳಾರಿ: ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದು, ಶ್ರೀರಾಮುಲು ಯಾಕೆ ಕಾರ್ಯಕ್ರಮದಲ್ಲಿ ಹಾಜರಾಗಿಲ್ಲ ಅನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ. ಬಿಜೆಪಿಯಲ್ಲಿ ಮನ್ನಣೆ ಸಿಗದ ಹಿನ್ನೆಲೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಸಚಿವ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಹೋದರರು ಮಾತ್ರ ಹಾಜರಾಗಿದ್ದಾರೆ. ಸಾಮಾನ್ಯವಾಗಿ ಜನಾರ್ದನ ರೆಡ್ಡಿ ಅವರ ಯಾವುದೇ ಕಾರ್ಯಕ್ರಮವಿದ್ದರೂ ಶ್ರೀ ರಾಮುಲು ತಮ್ಮನಂತೆ ಹಾಜರಾಗುತ್ತಿದ್ದರು. ಯಾರಿಗೆ ಆಹ್ವಾನವಿಲ್ಲದಿದ್ದರೂ ಶ್ರೀರಾಮುಲುಗೆ ಆಹ್ವಾನ ಇದ್ದೇ ಇರುತ್ತಿತ್ತು. ಆದ್ರೆ ಇತ್ತೀಚೆಗೆ ನಡೆದ ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದಾರೆ. ಹೀಗಾಗಿ ಆಪ್ತ ಗೆಳೆಯರ ಮಧ್ಯೆ ಮುನಿಸು ಉಂಟಾಗಿದೆಯಾ? ಎಂಬ ಚರ್ಚೆಗಳು ಶುರುವಾಗಿವೆ. ಜನಾರ್ದನ ರೆಡ್ಡಿಯಿಂದ ಆಪ್ತ ಸ್ನೇಹಿತ ಸಚಿವ ಶ್ರೀರಾಮುಲು ಅಂತರ ಕಾಯ್ದುಕೊಂಡಿದ್ದೇಕೆ? ಎಂಬ ಬಗ್ಗೆ ಗುಸು ಗುಸು ನಡೆಯುತ್ತಿದೆ.
ಗಾಲಿ ಜನಾರ್ದನ ರೆಡ್ಡಿಯವರ ಪ್ರೀತಿಯ ಮೊಮ್ಮಗಳಿಗೆ ‘ರಿಧಿರ’ ಎಂಬ ಹೆಸರಿಡಲಾಗಿದೆ. ಮಾಜಿ ಸಚಿವ ಜನಾರ್ದನರೆಡ್ಡಿ ಅವರು ಬಿಜೆಪಿ ಪಕ್ಷವನ್ನು ಕಟ್ಟಿದವರು. ಅವರು ಯಾವತ್ತಿದರೂ ಬಿಜೆಪಿ ಪಕ್ಷದ ಪರವಾಗಿ ಇರುತ್ತಾರೆ. ಅವರಿಗೆ ಮುಜುಗರ ತರುವ ಕೆಲಸವನ್ನ ಯಾರೂ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದರು. ಕಾಂಗ್ರೆಸ್ಗಿಂತ ಬಿಜೆಪಿ ನಾಯಕರೇ ನನಗೆ ತೊಂದರೆ ಕೊಡುತ್ತಿದ್ದಾರೆ. ನಾನು ಬೆಳೆಸಿದ ಪಕ್ಷದವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಈ ಹಿಂದೆ ಸಮಾರಂಭವೊಂದರಲ್ಲಿ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವೇಳೆ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ಬಗ್ಗೆ ಸುಳಿವು ನೀಡಿದ್ದರು. ಸದ್ಯ ಶ್ರೀರಾಮುಲು ಚುನಾವಣೆ ಸಮೀಪಿಸುತ್ತಿದ್ದಂತೆ ಕೊಂಚ ಮಟ್ಟಿಗೆ ಬ್ಯುಸಿಯಾಗಿದ್ದು, ತಮ್ಮ ಪ್ರಾಬಲ್ಯವಿರುವ ಗಡಿ ಪ್ರದೇಶಗಳು ಸೇರಿದಂತೆ 30 ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿಯವರ 2ನೇ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಭಾಗಿಯಾಗಿದ್ದರು. ಇದೇ ವೇಳೆ ರೆಡ್ಡಿ ಕುಟುಂಬದಿಂದ ಯಡಿಯೂರಪ್ಪನವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.