ರಾಯಚೂರು: ಪಿಎಫ್‌ಐ, ಎಸ್‌ಡಿಪಿಐ ಹಾಗೂ ಭಜರಂಗದಳ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.
ಭಾರತ್ ಜೋಡೊ ಯಾತ್ರೆ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ರಾಯಚೂರಿಗೆ ಆಗಮಿಸಿದ ವೇಳೆ ಮಾತನಾಡಿದ ನಲಪಾಡ್, ನಾವು ಮೊದಲಿನಿಂದಲೂ ಈ ಸಂಘಟನೆಗಳನ್ನ ಬ್ಯಾನ್ ಮಾಡಿ ಅಂತಲೇ ಹೇಳುತ್ತಿದ್ದೇವೆ. ಅಷ್ಟೇ ಅಲ್ಲ ಕೋಮು ಸೌಹಾರ್ದ ಕೆಡಿಸುವ ಯಾವುದೇ ಸಂಘಟನೆಯನ್ನಾಗಲಿ ಬ್ಯಾನ್ ಮಾಡಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ರು. ಇನ್ನು ಭಯೋತ್ಪಾದನೆಗೆ ನಿರುದ್ಯೋಗವೇ ಕಾರಣ ಅಂತ ನಾನು ಹೇಳಿಲ್ಲ, ಆದರೆ ನನ್ನ ಹೇಳಿಕೆಯನ್ನ ತಿರುಚಲಾಗಿದೆ. ನಾನು ಹೇಳಿದ್ದರ ಉದ್ದೇಶ ಬೇರೆಯಾಗಿತ್ತು, ಕೆಲಸ ಇಲ್ಲದಿರೋದಕ್ಕೆ ಯುವಕರು ದಾರಿ ತಪ್ಪುತ್ತಿದ್ದಾರೆ. ಕೆಲವರ ಬೌದ್ಧಿಕ ಮಟ್ಟ ಹಾಗೇ ಇರುತ್ತದೆ. ಅಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ಕೊಡಿ, ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ಇನ್ನು ಪೇಸಿಎಂ ಪೋಸ್ಟರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಲಪಾಡ್, ಗುತ್ತಿಗೆದಾರ ಸಂತೋಷ್ ಪಾಟೀಲ್ ಜೀವ ಕಳೆದುಕೊಂಡಿದ್ದಾನೆ. ಪಿಎಸ್‌ಐ ಹಗರಣ ಮಾಡಿದ್ದು ನಾವಾ? ಪೇ-ಸಿಎಂ ಪೋಸ್ಟರ್ ಹಾಕಿದ್ದಕ್ಕೆ ನಮ್ಮನ್ನ ಅರೆಸ್ಟ್ ಮಾಡ್ತಾರೆ. ರಾತ್ರಿ 1 ಗಂಟೆ ಸಮಯದಲ್ಲಿ ಕಚೇರಿ ಮೇಲೆ ರೇಡ್ ಮಾಡ್ತಾರೆ. ಆರೋಪ ಸುಳ್ಳು ಅನ್ನೋದಾದ್ರೆ ನೀವೆಕೆ ಟೆನ್ಷನ್ ತೆಗೆದುಕೊಳ್ತೀರಿ? ಜನರೇ ಸರಿ ತಪ್ಪು ತೀರ್ಮಾನ ಮಾಡುತ್ತಾರೆ. ಆರೋಪ ಸತ್ಯ ಆಗಿರೋದಕ್ಕೆ ನೀವು ಹೀಗೆ ಮಾಡುತ್ತಿದ್ದೀರಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.