ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಸಾರಿಗೆ ಬಂದ್‌ನಿಂದಾಗಿ ಆಟೋ, ಕ್ಯಾಬ್ ನೆಚ್ಚಿಕೊಂಡಿದ್ದ ಸಾವಿರಾರು ಜನ ಸಂಕಷ್ಟಕ್ಕೀಡಾಗಿದ್ದಾರೆ. ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಕ್ಯಾಬ್ ಸಿಗದೆ ಬಿಎಂಟಿಸಿ ಬಸ್ ಹತ್ತಿದ್ದಾರೆ.
ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIAL) ನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಲು ಕ್ಯಾಬ್ ಸಿಗದೆ ಅನಿಲ್ ಕುಂಬ್ಳೆ ಬಿಎಂಟಿಸಿ ವಾಯುವಜ್ರ ಬಸ್ ಏರಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸಿದ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಫೋಟೊ ಹಂಚಿಕೊಂಡಿರುವ ಕುಂಬ್ಳೆ, ‘ಇಂದು ವಿಮಾನ ನಿಲ್ದಾಣದಿಂದ ಮರಳಿ ಮನೆಗೆ ಬಿಎಂಟಿಸಿ ಪಯಣ’ ಎಂದು ಬರೆದುಕೊಂಡಿದ್ದಾರೆ.
ವಿಮಾನ ನಿಲ್ದಾಣದಿಂದ ಹೆಚ್ಚುವರಿ ಬಸ್:
ಬಾಡಿಗೆ ಕಾರು ಮಾಲೀಕರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿದ್ದು, ವಿಮಾನ ನಿಲ್ದಾಣದತ್ತ ಕಾರ್ಗಳು ಸುಳಿದಿಲ್ಲ. ವಿಮಾನ ನಿಲ್ದಾಣ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿರುವ ಏರ್ಪೋರ್ಟ್ ಆಡಳಿತ ಮಂಡಳಿ ಹಾಗೂ ಬಿಎಂಟಿಸಿ, ಹೆಚ್ಚುವರಿ ಬಸ್ಗಳನ್ನು ಓಡಿಸುತ್ತಿದೆ.
ಟ್ಯಾಕ್ಸಿ ಲಭ್ಯವಾಗದೇ ಇರುವುದರಿಂದ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ.
ಇದನ್ನೂ ಓದಿ; ಖಾಸಗಿ ಸಾರಿಗೆ ಬಂದ್: ವಿಮಾನ ನಿಲ್ದಾಣದಿಂದ ಹೆಚ್ಚುವರಿ ಬಸ್ ಸಂಚಾರ
ಏರ್ಪೋಟ್ ನಿಂದ ಬೆಂಗಳೂರಿನ ವಿವಿದೆಡೆಗೆ ಬಿಎಂಟಿಸಿ (BMTC) ವಾಯುವಜ್ರ ಬಸ್ಗಳ ಸಂಚಾರ ನಡೆಸಲಾಗ್ತಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೇಂದ್ರೀಯ ಬಿಎಂಟಿಸಿ ಡಿಸಿ ನಾಗರಾಜ್ ಮೂರ್ತಿ ಏರ್ಪೋರ್ಟ್ನಲ್ಲೆ ಬೀಡು ಬಿಟ್ಟಿದ್ದಾರೆ. 30 ಹೆಚ್ಚುವರಿ ಬಸ್ಗಳು ಒಡಾಟ ನಡೆಸುತ್ತಿದ್ದು, 100 ಟ್ರಿಪ್ಗಳನ್ನು ಹೆಚ್ಚಿಸಲಾಗಿದೆ. ಇಂದು ಒಂದೇ ದಿನ 900 ಕ್ಕೂ ಅಧಿಕ ಬಿಎಂಟಿಸಿ ಬಸ್ಗಳ ಟ್ರಿಪ್ಗಳನ್ನ ಆರಂಭಿಸಲಾಗಿದ್ದು, ಟ್ಯಾಕ್ಸಿಗಳಿಲ್ಲದೆ ಪ್ರಯಾಣಿಕರು ಬಿಎಂಟಿಸಿ ಬಸ್ ಮೊರೆ ಹೋಗುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.