ಬೆಂಗಳೂರು: ನಾನು ದೇವರ ಬಳಿ ಚುನಾವಣೆ ಗೆಲ್ಲುವ ಬಗ್ಗೆ ಬೇಡಿಕೊಳ್ಳಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು ವೈಕುಂಠ ಏಕಾದಶಿ ಪ್ರಯುಕ್ತ ನಗರದ ವೈಯ್ಯಾಲಿಕಾವಲ್‌ನಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೆಂಕಟೇಶ್ವರ ಅಭಿವೃದ್ಧಿಯ ಸಂಕೇತ. ಇಡೀ ಕರ್ನಾಟಕ ಅಭಿವೃದ್ಧಿಯಾಗಿ ಸಮೃದ್ಧಿಯಾಗಲಿದೆ ಎನ್ನುವ ವಿಶ್ವಾಸ ನನಗಿದೆ. ಹಿಂದೆಂದೂ ಕಾಣದ ಅಭಿವೃದ್ಧಿ ಈ ಬಾರಿ ಆಗಲಿ ಎಂದು ಅಪೇಕ್ಷೆ ಪಡುತ್ತೇನೆ ಎಂದರು.
ಇಡೀ ರಾಜ್ಯ ಅಭಿವೃದ್ಧಿ, ಸಮೃದ್ಧಿ ಆಗಲಿ ಎಂದು ಬೇಡಿಕೊಂಡಿದ್ದೇನೆ. ಈ ವರ್ಷ ವೆಂಕಟೇಶ್ವರನ ಆಶೀರ್ವಾದ ನಮ್ಮ ಕರ್ನಾಟಕದ ಜನತೆಗೆ ಇರಲಿದೆ ಎಂದರು. ಜನರೇ ದೇವರು, ಎಲ್ಲರ ಮನಸ್ಸಿನಲ್ಲಿ ಏನಿದೆಯೋ ಅದೇ ಆಗಲಿದೆ. ನಾನು ಮಾಡಿರುವ ಕೆಲಸ, ನಾನು ಕೊಟ್ಟಿರುವ ಆಡಳಿತದಿಂದ ನನಗೆ ವಿಶ್ವಾಸವಿದೆ. ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಇಂದು ವೈಕುಂಠ ಏಕಾದಶಿ. ಈ ದಿನ ಹಿಂದುಗಳಿಗೆ ಬಹಳ ಪವಿತ್ರ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕು ಎನ್ನುವ ಪ್ರತೀತಿ ಇದೆ. ಹಾಗಾಗಿ, ತಿರುಪತಿಗೆ ಕೋಟಿಗಟ್ಟಲೆ ಜನ ಬಂದು ದರ್ಶನ ಮಾಡುತ್ತಿದ್ದಾರೆ. ನಾನು ಅಲ್ಲಿಗೆ ಹೋಗಿ ದರ್ಶನ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಇಲ್ಲಿ ದರ್ಶನ ಮಾಡುತ್ತಿದ್ದೇನೆ. ದೇವರ ದರ್ಶನ ಪಡೆದುಕೊಂಡ ಬಳಿಕ ಪುನೀತನಾದೆ ಎಂಬ ಭಾವನೆ ಬಂದಿದೆ ಎಂದು ಹೇಳಿದರು.