ಮೂಡಲಗಿ: ನಮ್ಮ ಬಿಜೆಪಿ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬಸವರಾಜ ಬೊಮ್ಮಾಯಿ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಉಪ ನೋಂದಣಾಧಿಕಾರಿಗಳ ಕಚೇರಿ ಉದ್ಘಾಟಿಸಿ ಮಾತನಾಡಿ, ಮೂಡಲಗಿ ತಾಲೂಕಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ .10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿರುವ ಹೊಸ ತಾಲೂಕುಗಳ ಪೈಕಿ ಮೂಡಲಗಿ ತಾಲೂಕಿಗೆ ಮಾತ್ರ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಆರಂಭಿಸಲಾಗಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಒತ್ತಡವೇ ಕಾರಣ ಎಂದರು. ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮೂಡಲಗಿ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆ ಉಪ ನೋಂದಣಾಧಿಕಾರಿ ಕಚೇರಿಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಈಡೇರಿಸಿದ್ದೇನೆ. ಈ ಕಚೇರಿಗೆ ತಾಲೂಕಿನ 48 ಗ್ರಾಮಗಳು ಸೇರ್ಪಡೆಯಾಗಿದ್ದು, ಸಾರ್ವಜನಿಕರಿಗೆ ಕಾರ್ಯ ಚಟುವಟಿಕೆಗಳು ಆರಂಭವಾಗಲಿದೆ. ಇನ್ನಾದರೂ ಮೂಡಲಗಿ ತಾಲೂಕಿನ ಜನತೆ ಬರುವ ಚುನಾವಣೆಯಲ್ಲಿ ಹೆಚ್ಚಿನ ಲೀಡ್ ನೀಡಿ ಮತ್ತೊಮ್ಮೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಅಂತ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 28,982 ನಾಗರಿಕರಿಗೆ ಸರ್ಕಾರದ ಮಾಸಾಶನ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮದಿಂದ ಈ ಸಾಧನೆ ನಡೆದಿದೆ. ಜಿಲ್ಲಾಧಿಕಾರಿಗಳು ಹಳ್ಳಿಗಳತ್ತ ಬಂದು ವಾಸ್ತವ್ಯ ಹೂಡಿ ಸ್ಥಳದಲ್ಲಿಯೇ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವಂತೆ ಆದೇಶ ನೀಡಿದ್ದೇನೆ. ಬಡ ಫಲಾನುಭವಿಗಳ ತಾಲೂಕು ಕಚೇರಿ ಅಲೆದಾಟ ತಪ್ಪಿದೆ. ನಾನು ಗ್ರಾಮ ವಾಸ್ತವ್ಯ ಹೂಡುತ್ತಿದ್ದೇನೆ ಎಂದು ತಿಳಿಸಿದರು.