ಬೆಂಗಳೂರು: ಏಪ್ರಿಲ್ 8 ರಂದು ಸಂಸದೀಯ ಮಂಡಳಿ ಸಭೆಯಲ್ಲಿ ಬಿಜೆಪಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಗ್ರೌಂಡ್ ರಿಯಾಲಿಟಿ ಆಧಾರದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಇಂದು ಮತ್ತು ನಾಳೆ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಹೈಕಮಾಂಡ್ ಗೆ ಕಳುಹಿಸಿಕೊಡಲಿದ್ದೇವೆ ಎಂದು ಮಾಹಿತಿ ನೀಡಿದರು. ಇಂದು ರಾಜ್ಯ ಸಮಿತಿ ಸಭೆ ಇದೆ. ಎರಡು ದಿನ ಸಭೆ ಮಾಡುತ್ತೇವೆ.
ಹಲವಾರು ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಅತ್ಯಂತ ಉತ್ಸಾಹದಲ್ಲಿದ್ದಾರೆ. ಟಿಕೆಟ್ ಕೊಡುವ ವ್ಯವಸ್ಥೆ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಮಾಡಲಾಗಿದ್ದು, ಸರಳವಾಗಿ ಟಿಕೆಟ್ ಹಂಚಿಕೆ ಆಗಲಿದೆ ಎಂದರು. ಬಿಜೆಪಿ ಬಿಟ್ಟು ಹೋಗುವವರಿಂದ ಯಾವುದೇ ಪರಿಣಾಮ ಆಗೋದಿಲ್ಲ, ಬಿಜೆಪಿಯಿಂದ ಮತ್ತೆ ಯಾರು ಹೋಗುವುದಿಲ್ಲ. ಸುಮ್ಮನೆ ಡಿಕೆ ಶಿವಕುಮಾರ್ ಹೆಸರುಗಳನ್ನು ಬಿಡುತ್ತಿದ್ದಾರೆ ಅಷ್ಟೆ ಎಂದರು.
ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯಬೇಕಿದ್ದ ರಾಜ್ಯ ಚುನಾವಣಾ ಸಮಿತಿ ಸಭೆ ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗಿದೆ. ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಪ್ರತಿಭಟನೆ ನಡೆಯೋ ಆತಂಕದಿಂದ ಪಕ್ಷದ ಕಚೇರಿಯಿಂದ ಸಭೆಯನ್ನು ಶಿಫ್ಟ್ ಮಾಡಲಾಗಿದೆ, ಜಗನ್ನಾಥ ಭವನದಲ್ಲಿ ನಡೆಯಬೇಕಿದ್ದ ಸಭೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿರುವ ಗೋಲ್ಡನ್ ಪಾಮ್ಸ್ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗಿದೆ.