ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಕರೆ ನೀಡಲಾಗಿರುವ ನಗರ ಬಂದ್ ನಡುವೆಯೂ ಅಲ್ಲಲ್ಲಿ ಪ್ರಯಾಣಿಕರಿಗೆ ಎಂದಿನಂತೆ ಸೇವೆ ನೀಡುತ್ತಿವೆ. ಆಟೋ, ಕ್ಯಾಬ್ ಚಾಲಕರು ಜೀವನ ಸಾಗಿಸಲು ಪ್ರಯಾಣಿಕರಿಗೆ ಸೇವೆ ನೀಡಲು ಮುಂದಾಗಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಘಟನೆ ಕುರಿತಂತೆ ಟ್ವಿಟ್ಟರ್‌ನಲ್ಲಿ ಪ್ರಯಾಣಿಕ ಪ್ರದ್ಯುಮ್ನ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : Bengaluru Bandh; ಬಂದ್‌ನಿಂದ ಸಾರ್ವಜನಿಕರಿಗೆ ಯಾವ ತೊಂದರೆಯೂ ಆಗಲ್ಲ; ರಾಮಲಿಂಗಾರೆಡ್ಡಿ
ಬಂದ್ ನಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಾಲೂ ಶಾಲಾ ಕಾಲೇಜುಗಳಿಗೆ ಕರೆದೊಯ್ಯಲು ಬರುತ್ತಿದ್ದ ಖಾಸಗಿ ಬಸ್‌ಗಳು ರಸ್ತೆಗಿಳಿಯದೆ ವಿದ್ಯಾರ್ಥಿಗಳಿಗೂ ಬಂದ್ ಪರಿಣಾಮ ಬೀರುತ್ತಿದೆ.
ಖಾಸಗಿ ಸಾರಿಗೆಯ ಮುಷ್ಕರದಿಂದ ಬಿಎಂಟಿಸಿ ಬಸ್‌ಗಳು ಫುಲ್ ರಷ್ ಆಗಿ ಓಡಾಡುತ್ತಿವೆ. ಬಸ್‌ನಲ್ಲಿ ಪ್ರಯಾಣಿಕರ ಜನ ಜಂಗುಳಿ ಮುಂದುವರೆದಿದೆ.
ಎಂದಿನಂತೆ ತೆರೆದ ಶಾಲಾ ಕಾಲೇಜುಗಳು..
ಬೆಂಗಳೂರು ಬಂದ್ ಹಿನ್ನೆಲೆ ಯಾವುದೇ ಶಾಲೆ ಹಾಗೂ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿಲ್ಲ. ಆದರೆ ಖಾಸಗಿ ಶಾಲೆಗಳೊಂದಿಗೆ ಒಪ್ಪಂದದಲ್ಲಿರುವ ಖಾಸಗಿ ಬಸ್‌ಗಳು ಬಂದ್‌ನಲ್ಲಿ ಭಾಗಿಯಾಗಿವೆ.
ಬಂದ್ ಯಶಸ್ಸಿಗಾಗಿ ಪಣ ತೊಟ್ಟ ಖಾಸಗಿ ಸಾರಿಗೆ ಒಕ್ಕೂಟ…
ಬಂದ್ ಯಶಸ್ಸಿಗಾಗಿ ಖಾಸಗಿ ಸಾರಿಗೆ ಒಕ್ಕೂಟ ಪಣತೊಟ್ಟಿದೆ. ಬೆಂಗಳೂರಿನ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದ ಒಂದರಲ್ಲೇ 250ಕ್ಕೂ ಹೆಚ್ಚು ಬಸ್ ಸ್ತಬ್ದವಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರ ಪರಿಣಾಮ ಬೆಂಗಳೂರು ಜನಜೀವನದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುವ ಸಂಭವ ಇದೆ
ಖಾಸಗಿ ಸಮರ ಎದುರಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಸರ್ವಾಜನಿಕರಿಗೆ ಯಾವುದೇ ಸಮಸ್ಯೆ ಆಗದೇ ಇರಲು ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ಪ್ಲಾನ್ ಮಾಡಿದೆ. ಬಂದ್‌ನಿಂದ ಜನರಿಗೆ ತೊಂದರೆ ಆಗುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್ ಬಗ್ಗೆ ಆಟೋ ಚಾಲಕರು ಬೆಂಬಲ ನೀಡಿದ್ದಾರೆ. ಸಾರಿಗೆ ಒಕ್ಕೂಟ ಕರೆದಿರುವ ಬಂದ್‌ಗೆ ನಾವು ಬೆಂಬಲ ನೀಡುತ್ತೇವೆ. ಶಕ್ತಿಯೋಜನೆ ಜಾರಿಯಾದ ದಿನದಿಂದ ನಮಗೆ ಸಮಸ್ಯೆ ಆಗುತ್ತಿದೆ. ಅಷ್ಟೇ ಅಲ್ಲದೇ ರ‍್ಯಾಪಿಡೋ ಬಂದ್ ಮಾಡಲು ಸರ್ಕಾರ ಮುಂದಾಗಬೇಕು. ಯಾವುದೇ ಟ್ಯಾಕ್ಸ್ ಕೊಡದೇ ಅವರು ಬಾಡಿಗೆ ಹೋಗುತ್ತಿದ್ದಾರೆ. ಹಾಗಾಗಿ ರ‍್ಯಾಪಿಡೋ ವಾಹನಗಳನ್ನ ಬಂದ್ ಮಾಡಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟದ ಪ್ರಮುಖ ಬೇಡಿಕೆಗಳೇನು?
* ಖಾಸಗಿ ಬಸ್‌ಗಳನ್ನ ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು
* 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ನೀಡಬೇಕು
* ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು
* 10-15 ಲಕ್ಷ ಮೌಲ್ಯದ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲು ಈ ಹಿಂದಿನ ನಿಯಮವೇ ಜಾರಿಗೆ * ತರಬೇಕು
* ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ ಒಂದೇ ದರ ನಿಗದಿ ಮಾಡಬೇಕು
* ಅಸಂಘಟಿತ ವಾಣಿಜ್ಯ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
* ಚಾಲಕರಿಗೆ ವಸತಿ ಯೋಜನೆ ನೀಡಬೇಕು
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.