ಬೆಂಗಳೂರು: ಅಕ್ಟೋಬರ್ 7 ರಂದು ಚಾಮರಾಜನಗರದ ಬಂಡೀಪುರ ಅರಣ್ಯದ ಹೊರವಲಯದಿಂದ ಹೊರಟ ಭಾರತ ಜೋಡೋ ಯಾತ್ರೆಯು ಸಾಂಸ್ಕೃತಿಕ ರಾಜಧಾನಿ ಮೈಸೂರು ಮೂಲಕ ಸಾಗಿ, ಕಾವೇರಿ, ತುಂಗಭದ್ರಾ, ಕೃಷ್ಣಾ ನದಿಗಳನ್ನು ದಾಟುತ್ತಾ ರಾಯಚೂರಿನ ಹತ್ತಿ ಗದ್ದೆಗಳ ಬಳಿ ಕರ್ನಾಟಕದಲ್ಲಿ ಸುಧೀರ್ಘ 22ನೇ ದಿನದಂದು ತನ್ನ ಪಯಣವನ್ನು ಪೂರ್ಣಗೊಳಿಸಿ ನಿನ್ನೆ ಅಂತ್ಯವಾಗಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಭಾರತ್ ಜೋಡೋ ಪಾದಯಾತ್ರೆ ವೇಳೆ ಹಲವು ವಿಶೇಷ ಘಟನೆಗಳೇ ನಡೆದುಹೋಗಿವೆ. ಕರ್ನಾಟಕದ ಪಾದಯಾತ್ರೆವೇಳೆ ನಡೆದ ಪ್ರಮುಖ ಘಟನೆಗಳನ್ನ ನೋಡುವುದಾದ್ರೆ.
ಮಳೆಯ ನಡುವೆ ರಾಹುಲ್ ಭಾಷಣ :-
ಭಾರತ ಐಕ್ಯತೆ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿಯವರು ಸುರಿವ ಮಳೆಯ ನಡುವೆಯೇ ಮೈಸೂರಿನಲ್ಲಿ ಭಾಷಣ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾದರು. ರಾಜ್ಯದಲ್ಲಿ ಮೂರನೇ ದಿನದ ಭಾರತ್ ಜೋಡೋ ಯಾತ್ರೆ ಮೈಸೂರು ಬಂಡಿಪಾಳ್ಯ ಸರ್ಕಲ್ ತಲುಪುತ್ತಿದ್ದಂತೆ ರಭಸವಾಗಿ ಮಳೆ ಸುರಿಯತೊಡಗಿತು. ಮಳೆ ಲೆಕ್ಕಿಸದೇ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಮಾವೇಶದಲ್ಲಿ ನೆರಿದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.


ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ :-
ಅಕ್ಟೋಬರ್ 6 ರಂದು ಮಂಡ್ಯದಲ್ಲಿ ಪಾದಯಾತ್ರೆ ನಡೆಯುತ್ತಿದ್ದ ವೇಳೆ ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆ ಮಾಡಿದ ಘಟನೆ ನಡೆದಿತ್ತು. ಘಟನೆಯಲ್ಲಿ ಹಲವರಿಗೆ ಗಾಯವಾಗಿತ್ತು. ಈ ವೇಳೆ ಪೊಲೀಸರ ಗೂಂಡಾವರ್ತನೆಗೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಿಎಂ ಬೊಮ್ಮಾಯಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಖಂಡನೆ ವ್ಯಕ್ತಪಡಿಸಿದ್ದರು.


ಆನೆಗೆ ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ಪತ್ರ :-
ನಾಗರಹೊಳೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆ ಮತ್ತು ಅದರ ಮರಿಗೆ ಗಾಯವಾಗಿರುವ ಬಗ್ಗೆ ಸಿಎಂ ಬೊಮ್ಮಾಯಿಗೆ ರಾಹುಲ್ ಗಾಂಧಿ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ತಕ್ಷಣ ಎಚ್ಚೆತ್ತು ಆನೆ ಮತ್ಗೆತು ಅದರ ಮರಿಗೆ ಚಿಕಿತ್ಸೆ ಕೊಡಿಸಿದ್ದ ಸಿಎಂ ಬೊಮ್ಮಾಯಿ ಅದನ್ನ ಕಾಡಿಗೆ ಬಿಡುವ ವ್ಯವಸ್ಥೆ ಮಾಡಿದ್ದರು.


ರಾಹುಲ್‌ಗೆ ಸೋನಿಯಾ ಸಾಥ್ :-
ಅಕ್ಟೋಬರ್ 7ರಂದು ಪುತ್ರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾಲ್ಗೊಂಡು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಜೊತೆಗೆ, ಹಿರಿಯ ನಾಯಕರು, ರೈತರು, ಕಾರ್ಮಿಕ ವರ್ಗಗಳು, ಮಹಿಳೆಯರು ಮತ್ತು ಸಮಾಜದ ಎಲ್ಲಾ ವರ್ಗಗಳ ಜನರು ಯಾತ್ರೆಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸಿದರು.


ತಾಯಿಯ ಶೂ ಲೆಸ್ ಕಟ್ಟಿ ಗಮನ ಸೆಳೆದ ರಾಹುಲ್ :-
ಪಾಂಡವಪುರ ತಾಲ್ಲೂಕಿನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಮುಖಂಡರನ್ನು ಭೇಟಿಯಾಗುತ್ತಾ, ಅವರ ಜೊತೆಯಲ್ಲಿಯೇ ಮಾತನಾಡುತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡುಬಂದಿತು. ಈ ವೇಳೆ ಬಿಚ್ಚಿ ಹೋಗಿದ್ದ ತಾಯಿ ಸೋನಿಯಾ ಗಾಂಧಿ ಅವರ ಶೂ ಲೇಸ್ ಅನ್ನ ರಾಹುಲ್ ಗಾಂಧಿ ಕುಳಿತು ಕಟ್ಟಿದ್ದರು. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಜನರ ಗಮನ ಸೆಳೆದಿತ್ತು.


ಸಿದ್ದು – ರಾಹುಲ್ ರನ್ನಿಂಗ್ ರೇಸ್ :-
ಅಕ್ಟೋಬರ್ 7 ರಂದು ಮಂಡ್ಯ ಬಳಿ ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರ ಸುತ್ತ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎಲ್ಲರೂ ಆಶ್ಚರ್ಯ ಪಡುವ ರೀತಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಎಡಗೈಯನ್ನು ಹಿಡಿದುಕೊಂಡು ಓಡಲು ಆರಂಭಿಸುತ್ತಾರೆ. ಸಿದ್ದರಾಮಯ್ಯ ಕೂಡ ರಾಹುಲ್ ಗಾಂಧಿ ಸಮವಾಗಿ ಓಡಿ ಎಲ್ಲರ ಗಮನ ಸೆಳೆದಿದ್ದರು.


ಭಾವುಟ ಹಿಡಿದು ಡಿಕೆಶಿ-ರಾಹುಲ್ ರನ್ನಿಂಗ್ :-
ಅಕ್ಟೋಬರ್ 10 ರಂದು ತುಮಕೂರಿನ ಬಸವನಗುಡಿ ಬಳಿ ಪಾದಯಾತ್ರೆ ವೇಳೆ ಕಾಂಗ್ರೆಸ್ ಧ್ವಜವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈಗಿಟ್ಟ ರಾಹುಲ್, ಸುಮಾರು 100 ಮೀಟರ್‌ನಷ್ಟು ದೂರ ಒಂದೇ ಸಮನೇ ಓಡಿ ಗಮನ ಸೆಳೆದರು. ಈ ವೇಳೆ ರಾಹುಲ್ ಕಾಲನ್ನು ಉಳುಕಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸ್ಪೀಡ್‌ಗೆ ಓಡದ ಡಿಕೆಶಿ ಸ್ವಲ್ಪ ದೂರ ಓಡಿ ಸುಸ್ತಾಗಿ ಬಳಿಕ ನಡೆದುಕೊಂಡು ಪಾದಯಾತ್ರೆ ಮುಂದುವರೆಸಿದ್ದು ಎಲ್ಲರ ಗಮನಸೆಳೆಯಿತು.


ರಸ್ತೆಲ್ಲೇ ರಾಹುಲ್-ಡಿಕೆಶಿ ಪುಶ್ ಅಪ್ಸ್:-
ಅಕ್ಟೋಬರ್ 11 ರ ಪಾದಯಾತ್ರೆ ವೇಳೆ ಚಿತ್ರದುರ್ಗದ ಬಳಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ನಡುರಸ್ತೆಯಲ್ಲಿ ಪುಷ್-ಅಪ್ಸ್ ಮಾಡಿ ಜನರ ಹಾಗೂ ಮಾಧ್ಯಮದವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಾಲಕನೋರ್ವನೊಂದಿಗೆ ಪುಷಪ್ಸ್ ಮಾಡಿದ ರಾಹುಲ್ ಡಿಕೆಶಿಗೂ ಡಿಪ್ಸ್ ಹೊಡೆಯುವಂತೆ ಹೇಳಿದ್ರು. ಈ ವೇಳೆ ಡಿ.ಕೆ.ಶಿವಕುಮಾರ್ 2 ಪುಷಪ್ಸ್ ಮಾಡಿ ನನ್ನಿಂದ ಆಗಲ್ಲ ಎಂದು ರಾಹುಲ್‌ಗೆ ಕೈ ಮುಗಿದ್ದರು.


ಪಾದಯಾತ್ರೆಯಲ್ಲಿ ವಿದ್ಯುತ್ ಅವಘಢ:-
ಅಕ್ಟೋಬರ್ 16 ರಂದು ಭಾರತ್ ಜೋಡೋ ಯಾತ್ರೆ ವೇಳೆ ಬಳ್ಳಾರಿ ತಾಲೂಕಿನ ಹೊಸ ಮೋಕಾ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರ ಪರಿಣಾಮ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಐವರಿಗೆ ವಿದ್ಯುತ್ ಶಾಕ್ ತಗುಲಿದ್ದು, ಅವರನ್ನು ತಕ್ಷಣ ಮೋಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಮಾರನೆಯ ದಿನ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನ ಆರೋಗ್ಯ ವಿಚಾರಿಸಿ ತಲಾ ಒಂದು ಲಕ್ಷ ಪರಿಹಾರ ಘೋಷಣೆ ಮಾಡಿದ್ರು.


ಪಾದಯಾತ್ರೆಯಲ್ಲೇ ರಾಹುಲ್ ಮತದಾನ :-
ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿತ್ತು. ದೆಹಲಿಯ ಎಐಸಿಸಿ ಕಚೇರಿ ಸೇರಿದಂತೆ ಒಟ್ಟು 65 ಮತ ಕೇಂದ್ರಗಳಲ್ಲಿ ಮತದಾನ ನಡೆಸಲಾಯಿತು. ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಅಂದು ಬಳ್ಳಾರಿಯಲ್ಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಸಂಗನಕಲ್ಲು ವಿಶ್ರಾಂತಿ ತಾಣದಲ್ಲಿ ವ್ಯವಸ್ಥೆ ಮಾಡಿರುವ ವಿಶೇಷ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದರು. ರಾಹುಲ್ ಗಾಂಧಿ ಹಾಗೂ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿರುವ 40 ಮಂದಿ ಸದಸ್ಯರಿಗೆ ಸಂಗನಕಲ್ಲು ವಿಶ್ರಾಂತಿ ತಾಣದಲ್ಲೇ ವಿಶೇಷ ಮತಗಟ್ಟೆ ವ್ಯವಸ್ಥೆ ಮಾಡಲಾಗಿತ್ತು.


ರಾಹುಲ್ ಜೊತೆ ರಮ್ಯಾ ಹೆಜ್ಜೆ :-
ಭಾರತ್ ಜೋಡೋ ಕೊನೆಯ ದಿನದ ಯಾತ್ರೆಯಲ್ಲಿ ಪಾಲ್ಗೊಂಡ ಮಾಜಿ ಸಂಸದೆ ರಮ್ಯಾ, ರಾಹುಲ್ ಗಾಂಧಿಯವರ ಕೈ ಹಿಡಿದುಕೊಂಡು ಜೊತೆಯಾಗಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು. ಆ ಮೂಲಕ ರಾಜಕೀಯ ಹಾಗೂ ಸಿನಿಮಾ ರಂಗದಿಂದ ಬಹುಕಾಲ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆ ರಮ್ಯಾ ಮತ್ತೆ ಹಳೇ ಫಾರ್ಮ್‌ಗೆ ಮರಳುವ ಮುನ್ಸೂಚನೆಗಳನ್ನ ನೀಡಿದ್ರು. ಈಗಾಗಲೇ ಸಿನೆಮಾ ನಿರ್ಮಾಣ ಮೂಲಕ ಚಿತ್ರರಂಗಕ್ಕೆ ಮರಳಿರುವ ರಮ್ಯಾ ಪಾದಯಾತ್ರೆಯಲ್ಲಿ ಪಾಲ್ಗೊಂಡು ರಾಜಕೀಯಕ್ಕೂ ಮರಳುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.


ಇಷ್ಟೇ ಅಲ್ಲದೇ ರಾಹುಲ್ ಗಾಂಧೀ ಹಾಗೂ ಸೋನಿಯಾ ಗಾಂಧಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ರು ಹಾಗೂ ಮಂತ್ರಾಲಯಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದದ್ದು ವಿಶೇಷವಾಗಿತ್ತು. ಚಾಮರಾಜನಗರದ ಬಂಡೀಪುರ ಅರಣ್ಯದ ಹೊರವಲಯದಿಂದ ಹೊರಟ ಭಾರತ ಜೋಡೋ ಯಾತ್ರೆಯು ಸಾಂಸ್ಕೃತಿಕ ರಾಜಧಾನಿ ಮೈಸೂರು ಮೂಲಕ ಸಾಗಿ, ಕಾವೇರಿ, ತುಂಗಭದ್ರಾ, ಕೃಷ್ಣಾ ನದಿಗಳನ್ನು ದಾಟುತ್ತಾ ರಾಯಚೂರಿನ ಹತ್ತಿ ಗದ್ದೆಗಳ ಬಳಿ ಕರ್ನಾಟಕದಲ್ಲಿ ಸುಧೀರ್ಘ 22ನೇ ದಿನದಂದು ತನ್ನ ಪಯಣವನ್ನು ಪೂರ್ಣಗೊಳಿಸಿದೆ.