ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ದೇಶದಾದ್ಯಂತ ಹಮ್ಮಿಕೊಂಡಿದ್ದ ‘ಭಾರತ್ ಜೋಡೋ ಯಾತ್ರೆ’ಗೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಸೆ.7ರಂದು ಒಂದು ವರ್ಷ ತುಂಬಲಿದ್ದು ಈ ಹಿನ್ನೆಲೆ ಕಾಂಗ್ರೆಸ್ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ. ಸೆ.7ರಂದು ಜಿಲ್ಲಾಮಟ್ಟದಲ್ಲಿ ಭಾರತ್ ಜೋಡೊ ಯಾತ್ರೆ ನಡೆಸಲು ಪಕ್ಷ ತೀರ್ಮಾನಿಸಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ 2022ರ ಸೆ.7ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿ.ಮೀ ದೂರ ಭಾರತ್ ಜೋಡೋ ಯಾತ್ರೆ ನಡೆದಿತ್ತು. ಈ ಯಾತ್ರೆ ಯಶಸ್ವಿಯಾಗುತ್ತಿದ್ದಂತೆ, ಭಾರತ್ ಜೋಡೋ ಯಾತ್ರೆ 2.0 ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಈ ನಡುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲೂ ಜೋಡೋ ಯಾತ್ರೆ ನಡೆಸಲು ನಿರ್ಧರಿಸಿದೆ.
ಇದನ್ನೂ ಓದಿ: ಗಡಿ ರಾಜ್ಯಗಳಲ್ಲಿ ಜಿ20 ಸಭೆಗೆ ಪಾಕ್-ಚೀನಾ ವಿರೋಧ ; ಪ್ರಧಾನಿ ಹೇಳಿದ್ದೇನು?
ಈ ಕುರಿತು ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಮಾಹಿತಿ ನೀಡಿ, ಪ್ರತಿ ಜಿಲ್ಲೆಯಲ್ಲೂ ಸಂಜೆ 5ರಿಂದ 6 ಗಂಟೆ ವರೆಗೆ ಭಾರತ್ ಜೋಡೋ ಯಾತ್ರೆ ನಡೆಸಲು ಸೂಚಿಸಿದ್ದಾರೆ. ಆದರೆ ಎರಡನೇ ಬಾರಿ ಯಾತ್ರೆ ನಡೆಸುವ ಕುರಿತು ಸಮಿತಿ ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ದಿನಾಂಕ ಸೇರಿದಂತೆ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.