ನವದೆಹಲಿ : ದೇಶದ ಹೆಸರನ್ನು ‘ಇಂಡಿಯಾ'(India) ದಿಂದ ‘ಭಾರತ್’ (Bharat) ಎಂದು ಬದಲಾಯಿಸುವ ಬಗ್ಗೆ ಎಲ್ಲೆಡೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ನಡುವೆ ಇಂದು ನಡೆದ ಜಿ20 ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಭಾರತ್’ ಎಂಬ ನಾಮಫಲಕ ಪ್ರದರ್ಶಿಸಲಾಗಿದೆ.
ಎರಡು ದಿನಗಳ ಕಾಲ ನಡೆಯಲಿರುವ ಜಿ20 ಶೃಂಗಸಭೆಗೆ ಇಂದು ಚಾಲನೆ ನೀಡಲಾಯಿತು. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಭಾಷಣ ಮಾಡಿದರು. ಈ ವೇಳೆ ಪ್ರಧಾನಿ ಮುಂದೆ ‘ಇಂಡಿಯಾ’ ಬದಲು ‘ಭಾರತ್’ ಎಂಬ ನಾಮಫಲಕ ಇಡಲಾಗಿತ್ತು.
ಕೆಲ ದಿನಗಳ ಹಿಂದೆ ಜಿ20 ಶೃಂಗಸಭೆಯ ಔತಣಕೂಟಕ್ಕೆ ರಾಷ್ಟ್ರಪತಿಯನ್ನು ಆಹ್ವಾನಿಸಿದ್ದ ಪತ್ರಿಕೆಯಲ್ಲಿ ಮೊದಲ ಬಾರಿಗೆ ‘ಭಾರತ್’ ಎಂಬ ಹೆಸರು ಕಾಣಿಸಿಕೊಂಡಿತ್ತು. ಪ್ರೆಸಿಡೆಂಟ್ ಆಫ್ ಇಂಡಿಯಾ (President of India) ಬದಲು ಪ್ರೆಸಿಡೆಂಟ್ ಆಫ್ ಭಾರತ್ (President of Bharat) ಎಂದು ಅಹ್ವಾನ ಪತ್ರಿಕೆಯಲ್ಲಿ ಹಾಕಲಾಗಿತ್ತು. ಬಳಿಕ ಪ್ರಧಾನಿಯ ಮೋದಿಯವರ ಇಂಡೋನೇಷ್ಯಾ ಪ್ರವಾಸದ ವೇಳಾಪಟ್ಟಿಯಲ್ಲೂ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ (Prime Minister of Bharat) ಎಂದು ನಮೂದಿಸಲಾಗಿತ್ತು.
ಭಾರತ್ ಹೆಸರು ಪರ-ವಿರೋಧ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿರುವ ನಡುವೆ ಇಂದು ಮತ್ತೊಮ್ಮೆ ಜಾಗತಿಕ ನಾಯಕರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಭಾರತ್ ಫಲಕ ಪ್ರದರ್ಶನ ಮಾಡಲಾಗಿದೆ. ಈ ಮೂಲಕ ಭಾರತ್ ಎಂಬ ಹೆಸರನ್ನು ಅಧಿಕೃತ ಮಾಡಿರುವುದಾಗಿ ಕೇಂದ್ರ ಸರ್ಕಾರ ಪರೋಕ್ಷ ಸಂದೇಶ ನೀಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.